ಲೂಸಿಯಾನ: ಅಮೆರಿಕದ 12 ಕ್ಕೂ ಹೆಚ್ಚು ರಾಜ್ಯಗಳು ಕೊರೊನಾ ವೈರಸ್ ಬಿಕ್ಕಟ್ಟಿನ ಕಾರಣದಿಂದ ವಿಧಿಸಲಾಗಿದ್ದ ಲಾಕ್ಡೌನ್ ತೆರವುಗೊಳಿಸಿವೆ. ಇದರೊಂದಿಗೆ ಈ ರಾಜ್ಯಗಳಲ್ಲಿನ ಎಲ್ಲ ರೆಸ್ಟೋರೆಂಟ್, ಅಂಗಡಿಗಳು ಹಾಗೂ ಇನ್ನಿತರ ವ್ಯಾಪಾರ ಚಟುವಟಿಕೆಗಳು ಎಂದಿನಂತೆ ಪುನಾರಂಭವಾಗಲಿವೆ. ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಗೆ ಆದಷ್ಟು ಬೇಗ ಚೇತರಿಕೆ ನೀಡಲು ರಾಜ್ಯಗಳು ಈ ಕ್ರಮ ಕೈಗೊಂಡಿದ್ದು, ಕೊರೊನಾ ವೈರಸ್ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಆದೇಶಿಸಿವೆ.
ಲೂಸಿಯಾನಾ ರಾಜ್ಯದಲ್ಲಿ ಜನ ಹೋಟೆಲ್ಗಳಲ್ಲಿ ತಿಂಡಿ ತಿನ್ನಬಹುದು. ಆದರೆ ಕೂರುವ ಟೇಬಲ್ಗಳ ಮಧ್ಯೆ 10 ಅಡಿ ಅಂತರ ಇರುವುದು ಕಡ್ಡಾಯ. ಇಲ್ಲಿ ಕುಡಿಯಲು ನೀರು ಪೂರೈಕೆ ಮಾಡುವಂತಿಲ್ಲ. ನೆಬ್ರಾಸ್ಕಾದ ಮಾಲ್ ಒಂದರಲ್ಲಿ ಸಾಮಾಜಿಕ ಅಂತರ ಕಾಪಾಡಲು ಎಲ್ಲೆಡೆ ಫ್ಲೆಕ್ಸಿಗ್ಲಾಸ್ಗಳನ್ನು ಅಳವಡಿಸಲಾಗಿದೆ. ಮಾಲ್ನೊಳಗೆ ಹೋಗಿ ಬಂದರೆ ಜೈಲಿಗೆ ಹೋಗಿ ಬಂದಂಥ ಅನುಭವವಾಗುತ್ತಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಕೊಲೊರಾಡೊ ರಾಜ್ಯದಲ್ಲಿ ಸಲೂನ್ ಹಾಗೂ ಅಂಗಡಿಗಳನ್ನು ತೆರೆಯಲಾಗಿದೆ. ಆದರೆ ಪಕ್ಕದ ಡೆನಿವರ್ ಹಾಗೂ ಇನ್ನಿತರ ಕೌಂಟಿಗಳಲ್ಲಿ ಸ್ಟೇ ಆ್ಯಟ್ ಹೋಂ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ದಕ್ಷಿಣ ಕೆರೋಲಿನಾದ ಬೀಚ್ಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ವಾಷಿಂಗ್ಟನ್ನಲ್ಲಿ ಮೇ 31 ರವರೆಗೆ ಕಟ್ಟುನಿಟ್ಟಾದ ನಿರ್ಬಂಧಗಳು ಮುಂದುವರಿಯಲಿವೆ.