ವಾಷಿಂಗ್ಟನ್: ಕೋವಿಡ್ ಮಹಾಮಾರಿ ಜಗತ್ತಿನಾದ್ಯಂತ ಮತ್ತೆ ಹರಡಿಕೊಳ್ಳುತ್ತಿದೆ. ಭಾರತದಲ್ಲೂ ಕೊರೊನಾ ಹಾವಳಿ ಹೆಚ್ಚುತ್ತಿದ್ದು, ಸೋಂಕಿತರ ಹಾಗೂ ಸಾವಿನ ಪ್ರಮಾಣ ಏರುತ್ತಿದೆ. ಅಂತೆಯೇ ಭಾರತ ಸೇರಿ ಹಲವು ದೇಶಗಳಿಗೆ ಅಮೆರಿಕ ಸಹಾಯ ಹಸ್ತ ಚಾಚಿದೆ.
ನಾವು ಭಾರತ ಮತ್ತು ಬ್ರೆಜಿಲ್ಗೆ ಸಹಾಯ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದ್ದು, ವ್ಯಾಕ್ಸಿನ್ ತಯಾರಿಕೆಗೆ ಕಚ್ಚಾ ಸಾಮಗ್ರಿಗಳನ್ನು ಅವರು ಕೇಳಿದ್ದರು. ಆದ್ದರಿಂದ ಭಾರತಕ್ಕೆ ಕಚ್ಚಾ ವಸ್ತುಗಳ ಜೊತೆಗೆ ಆಕ್ಸಿಜನ್ ಕೂಡ ಪೂರೈಸುತ್ತಿದ್ದೇವೆ. ಭಾರತಕ್ಕೆ ನಾವು ಸಾಕಷ್ಟು ಸಹಾಯ ಮಾಡುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ವ್ಯಾಕ್ಸಿನ್ ಪೂರೈಕೆ ಕುರಿತು ಮಾತನಾಡಿರುವ ಅವರು, ಕೆನಡಾ ಮತ್ತು ಮೆಕ್ಸಿಕೋಗೆ ಅಸ್ಟ್ರಾಜೆನೆಕಾ ವ್ಯಾಕ್ಸಿನ್ ಕಳಿಸುತ್ತಿದ್ದೇವೆ. ಇನ್ನು ಇತರೇ ದೇಶಗಳು ಕೂಡ ಮಾತುಕತೆ ನಡೆಸುತ್ತಿವೆ. ಬೇರೆ ಯಾವ ದೇಶಕ್ಕೆ ಲಸಿಕೆ ನೀಡುತ್ತೇವೆ ಎಂಬುದನ್ನು ನಾನು ಘೋಷಿಸಲ್ಲ. ಆದ್ರೆ ಬ್ರೆಜಿಲ್ ಮತ್ತು ಭಾರತ ಸೇರಿದಂತೆ ಇತರೆ ದೇಶಗಳಿಗೆ ಜುಲೈ 4 ರಂದು ನಮ್ಮಲ್ಲಿರುವ ಲಸಿಕೆಯಲ್ಲಿ ಶೇ.10 ರಷ್ಟುನ್ನು ವಿತರಿಸುತ್ತೇವೆ ಎಂದು ಬೈಡೆನ್ ಹೇಳಿದ್ದಾರೆ.
ಜುಲೈ 4ರೊಳಗೆ ಅಮೆರಿಕಾದ ಶೇ.70 ರಷ್ಟು ವಯಸ್ಕರಿಗೆ ಲಸಿಕೆ ಹಾಕುವುದು ಹಾಗೂ ಸಹಜ ಜೀವನಕ್ಕೆ ಮರಳಲು ಹೆಜ್ಜೆ ಇಡುವುದು ನಮ್ಮ ಗುರಿ ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.