ವಾಷಿಂಗ್ಟನ್ : ಹವಾಮಾನ ಬದಲಾವಣೆ ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಅಧಿಕೃತವಾಗಿ ಹಿಂದೆ ಸರಿದಿದೆ
ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯಲಾಗಿದೆ ಎಂದು 2017ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸುಮಾರು 200 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಈ 200 ರಾಷ್ಟ್ರಗಳ ಪೈಕಿ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದ ಏಕೈಕ ರಾಷ್ಟ್ರ ಅಮೆರಿಕವಾಗಿದೆ.
ಭಾರತ ಮತ್ತು ಚೀನಾದಂತಹ ದೇಶಗಳಿಗೆ ಲಾಭಕರವಾಗಿರುವ ಈ ಕ್ರೂರ ಒಪ್ಪಂದ ಅಮೆರಿಕಕ್ಕೆ ಅನ್ಯಾಯ ಮಾಡಿದೆ ಎಂದು 2017ರಲ್ಲಿ ಟ್ರಂಪ್ ಆರೋಪಿಸಿದ್ದರು. ಆಗ ಟ್ರಂಪ್ ಅವರ ಈ ನಿರ್ಧಾರಕ್ಕೆ ಜಾಗತಿಕ ರಾಜಕೀಯ ಮತ್ತು ಉದ್ಯಮ ನಾಯಕರಿಂದ ಭಾರಿ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿತ್ತು.
ಒಪ್ಪಂದದ ಪ್ರಕಾರ, ಸಹಿ ಹಾಕಿದ ಮೂರು ವರ್ಷಗಳ ನಂತರ ತಮ್ಮ ನಿರ್ಧಾರವನ್ನು ಹಿಂಪಡೆಯಬಹುದು. ಒಪ್ಪಂದ ಹಿಂಪಡೆದ ದಿನದಿಂದ ಮತ್ತೆ ನಿರ್ಧಾರ ಬದಲಿಸಲು ಒಂದು ವರ್ಷದವರೆಗೆ ಅವಕಾಶವಿರುತ್ತದೆ. ಸಂಪೂರ್ಣವಾಗಿ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯಲು ನಾಲ್ಕು ವರ್ಷಗಳ ಗಡುವು ಇರುತ್ತೆ.
ಒಪ್ಪಂದದ ಮೂರು ವರ್ಷಗಳ ಬಳಿಕ ಅಂದ್ರೆ 2019 ನವೆಂಬರ್ 4ರಂದು ಟ್ರಂಪ್ ತಮ್ಮ ನಿರ್ಧಾರವನ್ನು ಘೋಷಿಸಿದ್ದರು. ತಮ್ಮ ನಿರ್ಧಾರವನ್ನು ಹಿಂಪಡೆಯಲು ಮತ್ತೊಂದು ವರ್ಷ ಅವಕಾಶವಿತ್ತು. ಆದರೆ, ಟ್ರಂಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ನಿನ್ನೆಗೆ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.
ಒಬ್ಬಂಟಿ ಅಮೆರಿಕ: ಆದರೆ, ಜಗತ್ತಿನ ಎಲ್ಲ ಪ್ರಮುಖ ದೇಶಗಳ ಮುಖ್ಯಸ್ಥರು ಟ್ರಂಪ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಹಾಗಾಗಿ ಈಗ ಈ ವಿಚಾರದಲ್ಲಿ ಅಮೆರಿಕ ಒಬ್ಬಂಟಿ ಆದಂತಾಗಿದೆ.
ಒಪ್ಪಂದ ಏನು?
ಕೈಗಾರಿಕೀಕರಣದ ದಿನಗಳಲ್ಲಿ ಇದ್ದುದಕ್ಕಿಂತ ಜಾಗತಿಕ ತಾಪಮಾನ ಶೇ. 2 ಡಿಗ್ರಿ ಸೆಲ್ಸಿಯಸ್‌ಗಿಂತ ಏರಿಕೆ ಆಗದಂತೆ ನೋಡಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಏರಿಕೆಯನ್ನು ಶೇ 1.5 ಡಿಗ್ರಿ ಸೆಲ್ಸಿಯಸ್‌ನೊಳಗೇ ಇರಿಸುವುದು ಒಪ್ಪಂದದ ಗುರಿಯಾಗಿದೆ.