ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಟ್ರಂಪ್ ಆಡಳಿತವು ಔಪಚಾರಿಕವಾಗಿ ವಿಶ್ವಸಂಸ್ಥೆಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕದ ಮಧ್ಯೆಯೇ ಜಾಗತಿಕ ಆರೋಗ್ಯ ಸಂಸ್ಥೆಯೊಂದಿಗಿನ ಸಂಬಂಧವನ್ನು ಯುಎಸ್ ಮುರಿದುಕೊಂಡಿದೆ.
ಚೀನಾದ ವುಹಾನ್ ನಗರದಲ್ಲಿ ಜನ್ಮ ತಾಳಿ ಇಡೀ ವಿಶ್ವವನ್ನೇ ನಡುಗಿಸುತ್ತಿರುವ ವೈರಸ್ಗೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಚೀನಾದೊಂದಿಗೆ ಕೈಜೋಡಿಸಿದೆ ಎಂದು ಕಿಡಿಕಾರಿದ್ದ ಅಮೆರಿಕ, ಆರೋಗ್ಯ ಸಂಸ್ಥೆಯು ಜಗತ್ತಿನ ದಾರಿ ತಪ್ಪಿಸಿದೆ ಎಂದು ಆರೋಪಿಸಿತ್ತು. ಜಾಗತಿಕವಾಗಿ ಅರ್ಧ ಮಿಲಿಯನ್ ಜನರು ಕೊರೊನಾಗೆ ಸಾವನ್ನಪ್ಪಿದ್ದಾರೆ. ಅದರಲ್ಲೂ ಅಮೆರಿಕಾದಲ್ಲೇ 1,30,000 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
ಏಪ್ರಿಲ್ನಲ್ಲಿ ಟ್ರಂಪ್ ಆಡಳಿತವು WHOಗೆ ಹಣ ನೀಡುವುದನ್ನು ನಿಲ್ಲಿಸಿತ್ತು. ಇದಾದ ಒಂದು ತಿಂಗಳ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಸಂಬಂಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದರು. ಇಲ್ಲಿ ಇನ್ನೊಂದು ಗಮನಾರ್ಹ ವಿಷಯವೇನೆಂದರೆ, ವಿಶ್ವ ಆರೋಗ್ಯ ಸಂಸ್ಥೆಗೆ ಯುಎಸ್ ಅತಿದೊಡ್ಡ ದೇಣಿಗೆ ನೀಡುವ ರಾಷ್ಟ್ರ ಆಗಿದ್ದು, ವಾರ್ಷಿಕವಾಗಿ 450 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಆದರೆ ಆರೋಗ್ಯ ಸಂಸ್ಥೆಗೆ ಚೀನಾದ ಕೊಡುಗೆ ಯುಎಸ್‌ನ ಹತ್ತನೇ ಒಂದು ಭಾಗವಾಗಿದೆ.
"ವಿಶ್ವ ಆರೋಗ್ಯ ಸಂಸ್ಥೆಯ 1946 ರ ಸಂವಿಧಾನದ ಠೇವಣಿದಾರನಾಗಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಹೇಳಿದೆ. ಅಮೆರಿಕದ ಈ ಕೋರಿಕೆ ಜುಲೈ 6, 2021 ರಿಂದ ಈ ನಿರ್ಧಾರ ಜಾರಿಗೆ ಬರುತ್ತದೆ ಎಂದು ವಿಶ್ವಸಂಸ್ಥೆ ಪ್ರಧಾನಿ ಕಾರ್ಯದರ್ಶಿಯವರ ವಕ್ತಾರ ಸ್ಟಿಫನ್ ಡುಜಾರಿಕ್ ಹೇಳಿದ್ದಾರೆ.
ಅಂತಹ ವಾಪಸಾತಿಗೆ ಎಲ್ಲ ಷರತ್ತುಗಳನ್ನು ಪೂರೈಸಲಾಗಿದೆಯೆ ಎಂಬುದನ್ನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಬ್ಲ್ಯುಎಚ್‌ಒ ಜೊತೆಗೂಡಿ ಸಮಾಲೋಚನೆ ಮಾಡಿ ಕ್ರಮಕೈಗೊಳ್ಳುತ್ತಾರೆ ಎಂದು ಡುಜಾರಿಕ್ ಹೇಳಿದರು.
ಜೂನ್ 21, 1948 ರಿಂದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನದ ಭಾಗದ ತರಹ ಇತ್ತು. ಇದರ ಭಾಗವಹಿಸುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಸೆಂಬ್ಲಿಯೂ ಅಂಗೀಕರಿಸಿತ್ತು. ಈಗ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ ಅಮೆರಿಕಕ್ಕೆ ಕೆಲವು ಷರತ್ತುಗಳನ್ನು ನಿಗದಿಪಡಿಸಿದೆ.
ಈ ಷರತ್ತುಗಳಲ್ಲಿ ಒಂದು ವರ್ಷದ ನೋಟಿಸ್ ನೀಡುವುದು ಸೇರಿದೆ, ಅಂದರೆ ಮುಂದಿನ ವರ್ಷ ಜುಲೈ 6 ರವರೆಗೆ ಈ ವಾಪಸಾತಿ ಕ್ರಮ ಜಾರಿಗೆ ಬರುವುದಿಲ್ಲ. ಏಕೆಂದರೆ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯ ಬಳಿಕ ಟ್ರಂಪ್ ಆಡಳಿತ ಕೊನೆಗೊಂಡರೆ, ಹೊಸ ಸರ್ಕಾರವು ಈ ಕ್ರಮವನ್ನು ಹಿಂಪಡೆಯುವ ಸಾಧ್ಯತೆ ಇದೆ. ಹಾಗಾಗಿ ಅಲ್ಲಿಯವರೆಗೆ ಯುಎಸ್ ಹಿಂದೆ ಸರಿಯುವ ನೀತಿಗೆ ಯಾವುದೇ ಕ್ರಮ ಜಾರಿಗೊಳಿಸುವುದಿಲ್ಲ ಎಂದು ಆರೋಗ್ಯ ಸಂಸ್ಥೆ ಹೇಳಿದೆ