ವಾಷಿಂಗ್ಟನ್: ಫೈಜರ್ ಹಾಗೂ ಬಯೊಎನ್‌ಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಅಮೆರಿಕ ಅನುಮತಿಸಿದೆ.
"ವೈರಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಇದು ಭರವಸೆಯ ಬೆಳವಣಿಗೆ" ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈ ಹಿಂದೆ 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಫೈಜರ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಎಫ್ಡಿಎ (ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್) ಅನುಮೋದನೆ ನೀಡಿತ್ತು.
ಇದನ್ನೂ ಓದಿ: ವರ್ಷದ ಬಳಿಕ ಕೋವಿಡ್ ಸಾವಿಲ್ಲದೆ ಒಂದು ದಿನ ಕಳೆದ ಇಂಗ್ಲೆಂಡ್
ಮಾರ್ಚ್ನಲ್ಲಿ ನಮ್ಮ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು, ಈ ಲಸಿಕೆ ವಯಸ್ಕರಿಗಿಂತಲೂ ಮಕ್ಕಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂಬುದನ್ನು ತೋರಿಸಿದೆ ಎಂದು ಫೈಜರ್-ಬಯೊಎನ್‌ಟೆಕ್ ಕಂಪನಿಗಳು ತಿಳಿಸಿ, 12 ರಿಂದ 15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ನೀಡುವಂತೆ ಯುಎಸ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಎಫ್ಡಿಎ ಅಸ್ತು ಎಂದಿದೆ.
ಕಳೆದ ವರ್ಷ ಡಿಸೆಂಬರ್‌ನಿಂದ ಈವರೆಗೆ 170 ಮಿಲಿಯನ್ಗೂ ಹೆಚ್ಚು ಡೋಸ್ಗಳನ್ನು ಅಮೆರಿಕಕ್ಕೆ ಫೈಜರ್-ಬಯೊಎನ್‌ಟೆಕ್ ವಿತರಿಸಿವೆ. ಫೈಜರ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಆರು ತಿಂಗಳ ಬಳಿಕ ಇದು ಕೊರೊನಾ ತಡೆಗಟ್ಟುವಲ್ಲಿ ಶೇಕಡಾ 91ಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಕಂಪನಿಗಳು ತಿಳಿಸಿವೆ.