ಬೋಸ್ಟನ್ : ಟ್ರಂಪ್ ಸರ್ಕಾರ ಘೋಷಿರುವ ನೂತನ ಶಿಕ್ಷಣ ನೀತಿಗೆ ಅಮೆರಿಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಸುಮಾರು 200 ರಷ್ಟು ಶಿಕ್ಷಣ ಸಂಸ್ಥೆಗಳು ಕಾನೂನಿನ ಮೊರೆ ಹೋಗಿವೆ.
ನೂತನ ನಿಯಮವು ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ ತರುತ್ತದೆ ಮತ್ತು ಶಿಕ್ಷಣ ಸಂಸ್ಥೆಗಳ ಯೋಜನೆಗಳು ವಿಫಲವಾಗುವುದಕ್ಕೆ ಕಾರಣವಾಗುತ್ತವೆ. ಹೊಸ ನಿಯಮದಿಂದ ದೇಶಕ್ಕೆ ಆರ್ಥಿಕ ನಷ್ಟವೇ ಹೊರತು ಯಾವುದೇ ಲಾಭವಿಲ್ಲ. ಹೊಸ ನೀತಿಯ ವಿರುದ್ಧ ಬೋಸ್ಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ಶಿಕ್ಷಣ ಸಂಸ್ಥೆಗಳು ಮೊಕದ್ದಮೆ ಹೂಡಿವೆ.
ಆರಂಭದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮಸಾಸುಚೆಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸರ್ಕಾರದ ನಿಯಮದ ವಿರುದ್ಧ ಕಾನೂನು ಮೊರೆ ಹೋಗಿತ್ತು. ಈಗ ಇತರ ನೂರಾರು ಶಿಕ್ಷಣ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ.
ಹಾರ್ವರ್ಡ್ ಮತ್ತು ಎಂಐಟಿ ವಿಶ್ವ ವಿದ್ಯಾನಿಲಯಗಳು ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ನ್ಯಾಯಾಲಯ ಸರ್ಕಾರದ ನಿಯಮವನ್ನು ಎತ್ತಿ ಹಿಡಿದರೆ ಶಿಕ್ಷಣ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಲಿವೆ.
ಕೊರೊನಾ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಆನ್ಲೈನ್ ತರಗತಿ ಅಳವಡಿಸಿಕೊಂಡರೆ ಭಾರತೀಯರು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು ದೇಶ ತೊರೆಯಬೇಕೆಂದು ಟ್ರಂಪ್ ಆಡಳಿತ ಹೊಸ ನಿಯಮ ತಂದಿದೆ. ಈ ನಿಯಮಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದರೆ ಆನ್ಲೈನ್ ತರಗತಿ ಆರಂಭಿಸುವುದೋ ಅಥವಾ ವಿದೇಶಿ ವಿದ್ಯಾರ್ಥಿಗಳನ್ನು ದೇಶ ತೊರೆಯಲು ಒತ್ತಾಯಿಸುವುದೋ ಎಂಬ ಇಕ್ಕಟ್ಟಿಗೆ ಶಿಕ್ಷಣ ಸಂಸ್ಥೆಗಳು ಸಿಲುಕಲಿವೆ.