ವಾಷಿಂಗ್ಟನ್: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ 2020 ರಲ್ಲಿ ಭಾರತ ಸೇರಿದಂತೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿತ್ತು. ಈ ವೇಳೆ ಮಹಿಳೆಯರ ಪೋಷಣೆ (Nutrition) ಮೇಲೆ ಲಾಕ್‌ಡೌನ್ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಮೆರಿಕದ ಸಂಶೋಧಕರ ಗುಂಪೊಂದು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಕೋವಿಡ್-19 ಲಾಕ್ ಡೌನ್ ನಿಂದ ಉಂಟಾಗಿರುವ ಪರಿಣಾಮಗಳು ಕೇವಲ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮಾನಸಿಕ ಒತ್ತಡ, ಆರೋಗ್ಯದ ಮೇಲೆಯೂ ಹೆಚ್ಚಿನ ಪರಿಣಾಮ ಬೀರಿದೆ.
ಟಾಟಾ - ಕಾರ್ನೆಲ್ ಇನ್‌ಸ್ಟಿಟ್ಯೂಟ್ ಫಾರ್ ಅಗ್ರಿಕಲ್ಚರ್ ಅಂಡ್ ನ್ಯೂಟ್ರಿಷನ್ ದೇಶದಲ್ಲಿ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಹೊರಬಿದ್ದಿದೆ. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಾದ ಉತ್ತರ ಪ್ರದೇಶದ ಮಹಾರಾಜ್‌ಗಂಜ್, ಬಿಹಾರದ ಮುಂಗರ್ ಮತ್ತು ಒಡಿಶಾದ ಕಂಧಮಾಲ್ ಮತ್ತು ಕಲಹಂಡಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ.
ಲಾಕ್ಡೌನ್ನಿಂದಾಗಿ ಉತ್ತಮ ಗುಣಮುಟ್ಟದ ಆಹಾರದಲ್ಲಿ ಕೊರತೆ ಕಂಡು ಬಂದಿದ್ದು, ಸಂಶೋಧನೆಯ ಫಲಿತಾಂಶ ಮಹಿಳೆಯರ ಆಹಾರ ವೈವಿಧ್ಯತೆಯ ಕುಸಿತವನ್ನು ಸೂಚಿಸುತ್ತಿದೆ. ವಿಶೇಷ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಬಡ ಕುಟುಂಬಗಳಿಗೆ ಪಡಿತರ ಒದಗಿಸುವ ಕೆಲಸ ಮಾಡಿದರೂ ಕೂಡ ಮಹಿಳೆಯರಲ್ಲಿ ಪೋಷಕಾಂಶಗಳ ಕೊರತೆ ಸಂಭವಿಸಿದೆ ಎಂದು ಎಕಾನಮಿಯಾ ಪೊಲಿಟಿಕಾ ಜರ್ನಲ್ ಇತ್ತೀಚಿಗೆ ಪ್ರಕಟಿಸಿದ ಸಂಚಿಕೆಯಲ್ಲಿ ತಿಳಿಸಿದೆ.