ನ್ಯೂಯಾರ್ಕ್ ಸಿಟಿ: ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 9 ಮಕ್ಕಳು ಸೇರಿದಂತೆ 19 ಜನ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಭಾನುವಾರ ನಗರದ 19 ಅಂತಸ್ತಿನ ಬ್ರಾಂಕ್ಸ್ ಅಪಾರ್ಟ್ಮೆಂಟ್ನಲ್ಲಿ 2 ಮತ್ತು 3ನೇ ಅಂತಸ್ತಿನಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಿಕ್ ಸ್ಪೇಸ್ ಹೀಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 2 ಮತ್ತು 3ನೇ ಅಂತಸ್ತಿನಲ್ಲಿ ನೋಡು - ನೋಡುತ್ತಲೇ ಬೆಂಕಿಯ ಜೊತೆ ದಟ್ಟವಾದ ಹೊಗೆ ಆವರಿಸಿತ್ತು.
ಈ ವೇಳೆ, ಕೆಲವು ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್ನಿಂದ ಹೊರ ಬರದೇ ಮನೆಯೊಳಗೆ ಸಿಕ್ಕಿಬಿದ್ದರು. ದಟ್ಟವಾದ ಹೊಗೆಯಿಂದ ತಮ್ಮನ್ನು ಮತ್ತು ತಮ್ಮ ಕುಟುಂಬಸ್ಥರನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರು.
ಗಾಳಿಗಾಗಿ ಕೆಲವರು ಮನೆಯ ಕಿಟಕಿಗಳನ್ನು ಮುರಿದರು. ಹೊಗೆ ಮನೆ ತುಂಬೆಲ್ಲಾ ಹರಡದಂತೆ ಬಾಗಿಲನ್ನು ಒದ್ದೆಯಾದ ಟವಲ್ಗಳಿಂದ ಮುಚ್ಚಿದರು. ಆದರೆ ಹೊಗೆಯ ಪರಿಮಾಣದಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ 9 ಮಕ್ಕಳು ಸೇರಿದಂತೆ 19 ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಕುಲ್ಗಾಮ್ ಎನ್ಕೌಂಟರ್: ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾಪಡೆ
ಬೆಂಕಿ ಭಾನುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಹೊತ್ತಿತ್ತು. ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಅನೇಕ ಪ್ರಾಣಗಳನ್ನು ಉಳಿಸಿದರು.
ಈ ಅವಘಡದಲ್ಲಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ 200 ಅಗ್ನಿಶಾಮಕ ದಳದವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಕಾರ್ಯಕ್ಕೆ ಧನ್ಯವಾದಗಳು ಎಂದು ನ್ಯೂಯಾರ್ಕ್‌ನ ಡೆಮೋಕ್ರಾಟ್‌ನ ಸೆನೆಟ್ ಬಹುಮತದ ನಾಯಕ ಚರ್ಚ್ ಶುಮರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾವನ್ನಪ್ಪಿರುವ ಮಕ್ಕಳು 16 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದು ಮೇಯರ್ ಎರಿಕ್ ಆಡಮ್ಸ್ ಅವರ ಹಿರಿಯ ಸಲಹೆಗಾರ ಸ್ಟೀಫನ್ ರಿಂಗೆಲ್ ಹೇಳಿದ್ದಾರೆ. ಕಟ್ಟಡದ ಅನೇಕ ನಿವಾಸಿಗಳು ಮೂಲತಃ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಿಂದ ಬಂದವರು ಎಂದು ಆಡಮ್ಸ್ ಹೇಳಿದರು.
ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್‌ನ ಮಾಹಿತಿಯ ಪ್ರಕಾರ, 2017ರಲ್ಲಿ ಅಮೆರಿಕದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 13 ಜನರು ಸಾವನ್ನಪ್ಪಿದ್ದರು. ಅದಾದ ಬಳಿಕ ಯುಎಸ್ ವಸತಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅವಘಡ ಇದಾಗಿದೆ.