ಮೈಸೂರು: ಮದುವೆ ವಿಚಾರವಾಗಿ ಸುದ್ದಿಯಲ್ಲಿರುವ ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್ ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ನ್ಯಾಯಾಲಯದ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ನಿಧನರಾದ ತಾಯಿಯನ್ನು ನೆನೆದು ಭಾವುಕರಾದರು. ಪತಿ ಆದಿಲ್ ಖಾನ್ ದುರಾನಿ ವಿರುದ್ಧ ವಂಚನೆ ಆರೋಪಗಳನ್ನು ಮಾಡಿ ಕಣ್ಣೀರಿಟ್ಟರು.
ಆದಿಲ್‌ಗೆ ಪೊಲೀಸ್ ಕಸ್ಟಡಿ: ರಾಖಿ ಸಾವಂತ್ ಅವರು ಮುಂಬೈನಲ್ಲಿ ವಂಚನೆ ಆರೋಪದಡಿ ಆದಿಲ್ ಖಾನ್ ದುರಾನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಮುಂಬೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ನಡುವೆ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಇರಾನ್ ದೇಶದ ವಿದ್ಯಾರ್ಥಿನಿಯೊಬ್ಬರು ತನ್ನನ್ನು ಆದಿಲ್ ಖಾನ್ ದುರಾನಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಂಧಿಯಾಗಿದ್ದ ಆದಿಲ್‌ನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಮೈಸೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್ ಫೆ. 27ರವರೆಗೆ 5 ದಿನಗಳ ಕಾಲ ಆದಿಲ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ರಾಖಿ ಸಾವಂತ್ ಕೂಡ ಹಾಜರಿದ್ದರು.
ಇದನ್ನೂ ಓದಿ: ಪತಿ ವಿರುದ್ಧ ದೂರು ಕೊಟ್ಟ ನಟಿ ರಾಖಿ ಸಾವಂತ್: ಆದಿಲ್ ಖಾನ್ ಅರೆಸ್ಟ್!
"ನನ್ನನ್ನು ಒಳ್ಳೆಯ ಮಾತುಗಳಿಂದ ಮರಳು ಮಾಡಿ ಆತ ನನಗೆ ವಂಚಿಸಿದ್ದಾನೆ. ನನ್ನನ್ನು ಕಾನೂನು ಪ್ರಕಾರ ಹಾಗೂ ಮುಸ್ಲಿಂ ಧರ್ಮದ ಪ್ರಕಾರ ಮದುವೆಯಾಗಿ, ನನ್ನ ಬಳಿ ಇದ್ದ 1.65 ಕೋಟಿ ರೂ. ಹಣವನ್ನೂ ಪಡೆದಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಸಾಯಿಸಲು ಯತ್ನಿಸಿದ್ದ" ಎಂದು ಆರೋಪಿಸಿದರು.
"ಈತನಿಗೆ ಜಾಮೀನು ಸಿಗಬಾರದು. ನನಗೆ ನ್ಯಾಯ ಬೇಕು. ಆತನಿಗೆ ಶಿಕ್ಷೆ ಆಗಬೇಕು" ಎಂದು ಆಗ್ರಹಿಸಿದರು. "ಆದಿಲ್ ಅವರ ತಂದೆ ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಸ್ವೀಕರಿಸುತ್ತಿಲ್ಲ. ಆದಿಲ್ ಒಬ್ಬ ವಂಚಕ" ಎಂದು ಹೇಳುತ್ತಾ ರಾಖಿ ಸಾವಂತ್ ಕಣ್ಣೀರು ಹಾಕಿದರು.
ಇದನ್ನೂ ಓದಿ: ರಾಖಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣ ದಾಖಲು