ಅಹಮದಾಬಾದ್(ಗುಜರಾತ್): ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ನಲುಗಿದ್ದ ಜನರು ಈಗ ಸಹಜ ಸ್ಥಿತಿಗೆ ತಲುಪಿದ್ದಾರೆ. ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಕೊರೊನಾ ಈ ಬಾರಿ ತಗ್ಗಿದ್ದು, ಈ ವರ್ಷದ ಹಬ್ಬಗಳನ್ನು ಜನರು ಬಲು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ನವರಾತ್ರಿ ಹಿನ್ನೆಲೆ ಸಿದ್ಧತೆಗಳು ಜೋರಾಗಿ ನಡೆದಿವೆ.
ಗರ್ಬಾ ಸಂಗೀತ ಕೇಳಿದಾಕ್ಷಣ ಗುಜರಾತಿ ಜನರು ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಈ ಸಂಗೀತ ನೃತ್ಯ ಅಂದ್ರೆ ಇಷ್ಟ. ನವರಾತ್ರಿ ವೇಳೆ ಗುಜರಾತ್ನಲ್ಲಿ ಗರ್ಬಾ ನೃತ್ಯ ಸಖತ್ ಸದ್ದು ಮಾಡುತ್ತದೆ. ನವರಾತ್ರಿಗೆ ಇನ್ನೇನು ಕೆಲ ದಿನಗಳು ಬಾಕಿ ಇದ್ದು, ನೃತ್ಯ ತಂಡದವರು ಅಭ್ಯಾಸ ಆರಂಭಿಸಿದ್ದಾರೆ.
ದಾಂಡಿಯಾ ತರಗತಿಯ ಆಡಳಿತಾಧಿಕಾರಿಗಳೂ ನವರಾತ್ರಿಗೆ ವಿಶೇಷ ಸಿದ್ಧತೆ ನಡೆಸಿದ್ದಾರೆ. ಪ್ರತಿ ಬಾರಿಯೂ ವೈರಲ್ ಆಗುವ ಚಿತ್ರಗೀತೆಗಳು ಮತ್ತು ಅವುಗಳ ಶೈಲಿಯನ್ನು ವಿಶಿಷ್ಟ ರೀತಿಯಲ್ಲಿ ಬಳಸಿ ಗರ್ಬಾ ಕಲಿಸಲಾಗುತ್ತಿದೆ. ಅದಕ್ಕೆ ತೆಲುಗಿನ ಹಾಡನ್ನು ತೆಗೆದುಕೊಳ್ಳಲಾಗಿದೆ. ತೆಲುಗಿನ ಪುಷ್ಪ ಸಿನಿಮಾದ ಸಾಮಿ ಸಾಮಿ..ಹಾಡು ಸೂಪರ್ ಹಿಟ್ ಆಗಿದೆ.
ಈ ಹಾಡಿನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಲಂಗ ದಾವಣಿ ತೊಟ್ಟು ಮಸ್ತ್ ಸ್ಟೆಪ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಿಗ್ನೇಚರ್ ಸ್ಟೆಪ್ ಸಖತ್ ಟ್ರೆಂಡ್ ಆಗಿದೆ. ಇದೀಗ ಈ ಹಾಡನ್ನು ಗರ್ಬಾ ಡ್ಯಾನ್ಸ್ಗೆ ಬಳಸಿಕೊಳ್ಳಲಾಗುತ್ತಿದೆ. ಗರ್ಬಾ ಡ್ಯಾನ್ಸ್ ಮಾಡುವವರು ಈ ಹಾಡಿಗೆ ಸಖತ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ.
ಇನ್ನೂ ನವರಾತ್ರಿಯನ್ನೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಸಹ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ವಿದೇಶದಲ್ಲಿ ನೆಲೆಸಿರುವ ಗುಜರಾತಿಗಳು ಸೂರತ್‌ನಿಂದ ಲೆಹೆಂಗಾ ಮತ್ತು ಚನಿಯಾಚೋಲಿ ಬಟ್ಟೆಯನ್ನು ಆರ್ಡರ್ ಮಾಡುತ್ತಿದ್ದಾರೆ. ಸಿಂಗಾಪುರ, ಅಮೆರಿಕ, ಲಂಡನ್ನಲ್ಲಿ ನೆಲೆಸಿರುವ ಗುಜರಾತಿಗಳು ಹಬ್ಬದ ಸಂಭ್ರಮದಲ್ಲಿದ್ದಾರೆ ಎಂದು ಗುಜರಾತಿ ವ್ಯಾಪಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅ.28ಕ್ಕೆ ಗಂಧದ ಗುಡಿ ಸಿನಿಮಾ ರಿಲೀಸ್.. ಹುಬ್ಬಳ್ಳಿಯಲ್ಲಿ ಅಪ್ಪು ಕಟೌಟ್ಗೆ ಕ್ಷೀರಾಭಿಷೇಕ
ಕೋವಿಡ್ ನಂತರ ಎರಡು ವರ್ಷಗಳ ಕಾಲ ನವರಾತ್ರಿಯನ್ನು ಆಯೋಜಿಸಿರಲಿಲ್ಲ. ಮತ್ತು ಸೂರತ್‌ಗೆ ವಿದೇಶದಿಂದ ಯಾವುದೇ ಆರ್ಡರ್ಗಳು ಬರುತ್ತಿರಲಿಲ್ಲ. ಆದರೆ, ಈ ಬಾರಿ ನವರಾತ್ರಿಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ವಿದೇಶದಲ್ಲಿ ನೆಲೆಸಿರುವವರು ಸಾಂಪ್ರದಾಯಿಕ ಉಡುಗೆಗಳನ್ನು ಆರ್ಡರ್ ಮಾಡುತ್ತಿದ್ದಾರೆ. ವಿಶೇಷವಾಗಿ ಚನಿಯಾಚೋಲಿಗೆ ಆರ್ಡರ್ ಮಾಡುತ್ತಿದ್ದಾರೆ. WhatsAppನಲ್ಲಿ ನಾವು ಫೋಟೋಗಳನ್ನು ಕಳುಹಿಸುತ್ತೇವೆ ಅಥವಾ ಜನರು ವೀಡಿಯೋ ಕರೆ ಮಾಡುವ ಮೂಲಕ ಆರ್ಡರ್ ಮಾಡುತ್ತಾರೆ ಎಂದು ತಿಳಿಸಿದರು.