ಬೆಂಗಳೂರು: ಟೈಟಲ್, ಕಾಸ್ಟ್, ಟ್ರೇಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿದ್ದ 'ಘೋಸ್ಟ್' ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಭರ್ಜರಿ ಓಪನಿಂಗ್ ಕೂಡಾ ಪಡೆದುಕೊಂಡಿದೆ. ಮಧ್ಯರಾತ್ರಿಯಿಂದಲೇ 'ಘೋಸ್ಟ್' ಸ್ಪೆಷಲ್ ಶೋನ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನೋಡಿದ ಶಿವಣ್ಣ ಅಭಿಮಾನಿಗಳು ಹ್ಯಾಟ್ರಿಕ್ ಹೀರೋನ ಗ್ಯಾಂಗ್ಸ್ಟರ್ ಅವತಾರಕ್ಕೆ ಫಿದಾ ಆಗಿದ್ದಾರೆ.
ಶಿವಣ್ಣ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿರುವ 'ಘೋಸ್ಟ್' ಸಿನಿಮಾವನ್ನು ನಿವೇದಿತಾ ಶಿವ ರಾಜ್ಕುಮಾರ್, ಧೀರೇನ್ ರಾಮ್ ಕುಮಾರ್ ಹಾಗೂ ಷಣ್ಮುಖ ಗೋವಿಂದರಾಜ್ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ಕುಳಿತು ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಖುಷಿಪಟ್ಟ ನಿವೇದಿತಾ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಅಪ್ಪನ ಯಂಗ್ ಲುಕ್ ಜೊತೆಗೆ ಆ್ಯಕ್ಷನ್ ಸೀನ್ಗಳಲ್ಲಿ ಅವರ ಎನರ್ಜಿ ಸೂಪರ್ ಎಂದು ಮೆಚ್ಚಿಕೊಂಡರು.
'ಘೋಸ್ಟ್' ಹೇಗಿದೆ?: 'ಬೀರ್ಬಲ್', 'ಓಲ್ಡ್ ಮಾಂಕ್'ನಂತಹ ಸಿನಿಮಾಗಳನ್ನು ನೀಡಿರುವ ಸ್ಯಾಂಡಲ್ವುಡ್ ಭರವಸೆ ನಿರ್ದೇಶಕ ಶ್ರೀನಿ ಸಿನಿಮಾ ಮೇಕಿಂಗ್ನಲ್ಲಿ ಗೆದ್ದು, ಚಿತ್ರದ ಕಥೆ ಹೇಳುವುದರಲ್ಲಿ ಸೋತಿದ್ದಾರೆ. 'ಘೋಸ್ಟ್' ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಹಿನ್ನೆಲೆ ಸಂಗೀತ. ಶಿವಣ್ಣ ಯಂಗ್ ಮ್ಯಾನ್ ಲುಕ್ನಲ್ಲಿ ಅಬ್ಬರಿಸಿದ್ದಾರೆ. ಮಲಯಾಳಂ ನಟ ಜಯರಾಮ್ ಜೊತೆಗೆ ಶಿವಣ್ಣನ ಹಾವು-ಏಣಿ ಆಟ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇದರ ಜೊತೆಗೆ 'ಘೋಸ್ಟ್' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವಣ್ಣನ ಯಂಗ್ ಲುಕ್ ಎಂಟ್ರಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ.
ಇದನ್ನೂ ಓದಿ: 'ಘೋಸ್ಟ್' ಅಬ್ಬರ ಶುರು: ಚಿತ್ರಮಂದಿರಗಳತ್ತ ಮುಗಿಬಿದ್ದ ಸಿನಿಪ್ರಿಯರು-ಫ್ಯಾನ್ಸ್ ಸೆಲೆಬ್ರೇಶನ್ ವಿಡಿಯೋ ನೋಡಿ
'ಘೋಸ್ಟ್' ಒಂದು ಜೈಲ್ ಹೈಜಾಕ್ ಮಾಡುವ ಕಥೆ. ವಯಸ್ಸು ಅರವತ್ತು ಪ್ಲಸ್ ಆದರೂ ಶಿವಣ್ಣನ ಎಂಟ್ರಿ ಸೀನ್ನಲ್ಲಿ ಅವರ ಎನರ್ಜಿ, ಕಣ್ಣಿನಲ್ಲೇ ಭಯ ಹುಟ್ಟಿಸುವ ಆ ಟೆರರ್ ಲುಕ್ಗೆ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೋರಾಗಿಯೇ ಬಿದ್ದಿದೆ. ಶಿವಣ್ಣ ಯಾಕೆ ಜೈಲ್ ಅನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್ ಹಿಂದಿರೋ ಐಡಿಯಾ ಏನು? ಹಣಕ್ಕಾಗಿ ಮಾಡಿದ್ರಾ ಅಥವಾ ವೈಯಕ್ತಿಕ ಕಾರಣಕ್ಕಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ನೀವು ಕೂಡ 'ಘೋಸ್ಟ್' ಸಿನಿಮಾವನ್ನು ಥಿಯೇಟರ್ಗಳಲ್ಲಿ ನೋಡಲೇಬೇಕು.
ಚಿತ್ರತಂಡ: ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಐದು ಸಾಹಸ ಸನ್ನಿವೇಶಗಳಿವೆ. ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಅರ್ಚನಾ ಜೋಯಿಸ್ ಮುಂತಾದವರು ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುತ್ತಿರುವ ಸಿನಿಮಾಗೆ ಸಂದೇಶ್ ಎನ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: 'ಘೋಸ್ಟ್ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್ ಲಾಲ್ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!