ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023ರ ಈ ಸಂದರ್ಭದಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಸಾಮಾಜಿಕ ಮಾಧ್ಯಮದಲ್ಲಿ ಒಂದು ಸುಂದರ ಪೋಸ್ಟ್ ಮಾಡಿದ್ದಾರೆ. ಮಹಿಳೆಯರ ಶಕ್ತಿ ಬಗ್ಗೆ ಮಾತನಾಡುತ್ತಾ, ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಪ್ರಪಂಚದ ಪ್ರತೀ ಮಹಿಳೆಯರಿಗೂ ಈ ಪೋಸ್ಟ್ ಅನ್ನು ಅರ್ಪಿಸಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ಪತ್ನಿ, ನಟಿ ನಮ್ರತಾ ಶಿರೋಡ್ಕರ್ ಅವರನ್ನು ತಮ್ಮ ಶಕ್ತಿಯ ಆಧಾರ ಸ್ತಂಭ ಎಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಹಲವು ಸಂದರ್ಶನಗಳಲ್ಲಿ ನಟ ಮಹೇಶ್ ಬಾಬು ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಯಶಸ್ಸಿಗೆ ನಮ್ರತಾ ಅವರೇ ಕಾರಣ ಎಂದು ತಿಳಿಸಿದ್ದಾರೆ.
ಮಹೇಶ್ ಬಾಬು ಇನ್ಸ್ಟಾ ಸ್ಟೋರಿ: 2023ರ ಮಹಿಳಾ ದಿನವನ್ನು ಹೃದಯಸ್ಪರ್ಶಿ ಬರಹದೊಂದಿಗೆ ಆಚರಿಸಿದ್ದಾರೆ. ತಮ್ಮ ಜೀವನದಲ್ಲಿ ನಮ್ರತಾ ಅವರ ಉಪಸ್ಥಿತಿ, ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಇಂದು ಮತ್ತು ನಿತ್ಯ ನಿಮ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಅಚಲ ನಿರ್ಣಯ ಆಚರಿಸುತ್ತಿದ್ದೇನೆ. ನನ್ನವಳಿಗೆ (ಪತ್ನಿ ನಮ್ರತಾ ಶಿರೋಡ್ಕರ್) ಮತ್ತು ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು" ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು 18ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ವಿವಾಹದ ನಂತರ ನಮ್ರತಾ ಸಿನಿಮಾ ವೃತ್ತಿಜೀವನದಿಂದ ದೂರವಿದ್ದಾರೆ. ಮಹೇಶ್ ಬಾಬು ತಮ್ಮ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಲು ಮನೆಯ ಮತ್ತು ಮಹೇಶ್ ಅವರ ವ್ಯವಹಾರಗಳ ಎಲ್ಲ ಜವಾಬ್ದಾರಿಗಳನ್ನು ನಮ್ರತಾ ತೆಗೆದುಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಹೇಶ್ ಬಾಬು ತಮ್ಮ ಪತ್ನಿಯ ತ್ಯಾಗವನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್ ಶೆಟ್ಟಿ
2000ರಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ವಂಶಿ ಚಿತ್ರದ ಮುಹೂರ್ತದಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಕೆಲ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿ, ಬಳಿಕ ಇಬ್ಬರೂ 2005ರಲ್ಲಿ ಹಸೆಮಣೆ ಏರಿದರು. ಈ ಸ್ಟಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಗೌತಮ್ ಘಟ್ಟಮನೇನಿ ಮತ್ತು ಮಗಳು ಸಿತಾರಾ ಘಟ್ಟಮನೇನಿ.
ಇದನ್ನೂ ಓದಿ: ಜಿಮ್ನಲ್ಲಿ ದೇಹ ದಂಡಿಸುತ್ತಿರುವ ಮಹೇಶ್ ಬಾಬು: ಹ್ಯಾಂಡ್ಸಮ್ ಸ್ಟಾರ್ ಫೋಟೋಗೆ ಫ್ಯಾನ್ಸ್ ಫಿದಾ
ಕೆಲಸ ವಿಚಾರ ಗಮನಿಸುವುದಾದರೆ, ನಟ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಅವರ ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತ್ತಾಡು, ಖಲೇಜಾ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ನಟ-ನಿರ್ದೇಶಕರ ಜೋಡಿ 12 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ. ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆ 2019ರಲ್ಲಿ ಮಹಾರಾಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಅವರ ಎರಡನೇ ಚಿತ್ರವಾಗಿದೆ.