ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ಉಮೇಶ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಅಭಿನಂದನೆ ಸಲ್ಲಿಸಿದೆ. ಫಿಲ್ಮ್ ಚೇಂಬರ್ನ ಅಧ್ಯಕ್ಷ ಭಾ.ಮಾ. ಹರೀಶ್ ನೇತೃತ್ವದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
'ಮುನಿತಾಯಿ'ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಅವರ ಕಲಾ ಪಯಣಕ್ಕೆ 62ರ ಸಂಭ್ರಮ. ಇದೇ ವೇಳೆ ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದ ನಾಗೇಶ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 60 ವರ್ಷ ಪೂರೈಸಿದ ಹಿನ್ನೆಲೆ ಅವರನ್ನು ಕೂಡ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಮೇಶ್, ಇದು ನನ್ನ ಸುದಿನ ಅಂತ ಭಾವಿಸುವೆ. ಚಿತ್ರರಂಗ ನನ್ನನ್ನು ಮನೆ ಮಗನಂತೆ ನೋಡಿದೆ. ಅಭಿಮಾನಿ ಅನ್ನದಾತರಿಂದ ಇಲ್ಲಿದ್ದೇನೆ. ಕಲಾಸೇವೆ ಮಾಡೋ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಭಾ.ಮಾ.ಹರೀಶ್ ಮಾತನಾಡಿ, ಹಿರಿಯ ಕಲಾವಿದ ಉಮೇಶ್ ಅವರು ಸನ್ಮಾನ ಸ್ವೀಕರಿಸಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ಕನ್ನಡ ಇಂಡಸ್ಟ್ರೀ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಇರಲಿ. ಹೊಸ ನಿರ್ದೇಶಕರು, ನಿರ್ಮಾಪಕರನ್ನು ಕರೆಸಿ ಪೋಷಕ ಕಲಾವಿದರ ಸಂಘದ ಮೂಲಕ ನೆನೆಪಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್, 'ಗೋಲ್ ಮಾಲ್ ರಾಧಾಕೃಷ್ಣ' ಸಿನಿಮಾದಲ್ಲಿ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. 'ಅಯ್ಯೋ ತಪ್ಪಾಯ್ತು', ನೀವು ತಪ್ಪು ತಿಳಿಯೊಲ್ಲ ತಾನೆ? ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ.
ವರನಟ ಡಾ.ರಾಜ್ ಕುಮಾರ್ ಜೊತೆ 'ಶೃತಿ ಸೇರಿದಾಗ' ಚಿತ್ರದಲ್ಲಿನ 'ಇದು ಬೊಂಬೆಯಾಟವಯ್ಯಾ' ಹಾಡಿನಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಉಮೇಶ್ ಅಮೋಘವಾಗಿ ನಟಿಸಿದ್ದಾರೆ. ಎಲ್ಲರಂತಲ್ಲ ನನ್ನ ಗಂಡ, ಜೇನುಗೂಡು ಸಿನಿಮಾ ಚಿತ್ರಗಳನ್ನು ಉಮೇಶ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಧೀರೆನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆ.26 ರಂದು ತೆರೆಗೆ