ಆಗಸ್ಟ್ 23 ಕೋಟ್ಯಂತರ ಭಾರತೀಯರ ಕನಸು ನನಸಾದ ಅದ್ಭುತ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ಚಂದ್ರಯಾನ 3 ಗಗನ ನೌಕೆಯು ಯಶಸ್ವಿಯಾಗಿ ಲ್ಯಾಂಡ್ ಆಗಿ ಐತಿಹಾಸ ಸೃಷ್ಟಿಸಿದ ಅಮೋಘ ಕ್ಷಣ. ಈ ವಿಶೇಷ ದಾಖಲೆ ಮಾಡಿದ ಭಾರತಕ್ಕೆ ವಿಶ್ವದ ನಾನಾ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹೋನ್ನತ ಸಾಧನೆಗೆ ಇಸ್ರೋ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಗುತ್ತಿದೆ. ಚಿತ್ರರಂಗದ ತಾರೆಯರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರತದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.
ಇದೀಗ ಈ ಸಾಲಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಚಂದ್ರಯಾನ 3ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾಯಿಜಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಚಂದ್ರಯಾನ 3ರ ಫೋಟೋವನ್ನು ಹಂಚಿಕೊಂಡು, "ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಇಡೀ ದೇಶವೇ ಹೆಮ್ಮೆ ಪಡುತ್ತದೆ. ಭಾರತ್ ಮಾತಾ ಕಿ ಜೈ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಸಲ್ಮಾನ್ ಖಾನ್ ಅವರ ಈ ಪೋಸ್ಟ್ಗೆ ಅಭಿಮಾನಿಗಳು 'ಭಾರತ್ ಮಾತಾ ಕಿ ಜೈ' ಮತ್ತು 'ಹಿಂದೂಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕಮೆಂಟ್ನಲ್ಲಿ ಮಾಡಿದ್ದಾರೆ.
ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಕೂಡ ಚಂದ್ರಯಾನ 3 ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. "ಚಂದ್ರನ ಮೇಲೆ ಭಾರತ. ಹೆಮ್ಮೆ. ಚಂದ್ರಯಾನ 3 ಅನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಇಸ್ರೋದ ಅದ್ಭುತ ವಿಜ್ಞಾನಿಗಳಿಗೆ ಅಭಿನಂದನೆಗಳು" ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್, 'ಭಾರತ ಇತಿಹಾಸ ನಿರ್ಮಿಸುತ್ತಿರುವುದನ್ನು ನೋಡುತ್ತಿರುವುದು ಅದೃಷ್ಟ. ಇದೀಗ ಭಾರತ ಚಂದ್ರನ ಮೇಲಿದೆ, ನಾವು ಚಂದ್ರನ ಮೇಲಿದ್ದೇವೆ. ಮಿಷನ್ ಮೂನ್‌ನ ಯಶಸ್ಸಿನೊಂದಿಗೆ ರಾಷ್ಟ್ರಕ್ಕೆ ಅತ್ಯಂತ ಹೆಮ್ಮೆಯ ಕ್ಷಣವನ್ನು ನೀಡಿದ್ದಕ್ಕಾಗಿ ಇಸ್ರೋಗೆ ಧನ್ಯವಾದ' ಎಂದಿದ್ದಾರೆ.
ಇದನ್ನೂ ಓದಿ: 'ಭಲೇ ಭಾರತ': ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಸ್ರೋಗೆ ವಿಶ್ವದ ಮೆಚ್ಚುಗೆ
ಕಾರ್ತಿಕ್ ಆರ್ಯನ್, ಚಂದ್ರಯಾನ 3ರ ಲ್ಯಾಂಡಿಂಗ್ ನೇರಪ್ರಸಾರ ವೀಕ್ಷಿಸಿದ ಅವರು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಐತಿಹಾಸಿಕ ಕ್ಷಣವನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಪ್ರತಿಕ್ರಿಯಿಸಿ, ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಎಲ್ಲ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳಿಗೆ ಧನ್ಯವಾದ ಎಂದು ಬರೆದಿದ್ದಾರೆ.
ಐತಿಹಾಸಿಕ ದಾಖಲೆ ಬರೆದ ಭಾರತ: ಭಾರತವು ಚಂದ್ರನ ಮೇಲೆ ಇಳಿಯುವ ಮೂಲಕ ಬಾಹ್ಯಕಾಶ ಕ್ಷೇತ್ರದಲ್ಲಿ ಐತಿಹಾಸ ಸಾಧನೆ ಮಾಡಿದೆ. ಈ ಅಪರೂಪದ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಗೂ ಭಾರತ ಪಾತ್ರವಾಗಿದೆ. ಜೊತೆಗೆ ದಕ್ಷಿಣ ಧ್ರುವದಲ್ಲಿ ನೌಕೆಯೊಂದನ್ನು ಇಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ದಾಖಲೆ ಬರೆದಿದೆ.
ಇಸ್ರೋ ತಂಡವನ್ನು ಅಭಿನಂದಿಸಲು ಮೋದಿ ಬೆಂಗಳೂರಿಗೆ: ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಯಶಸ್ವಿಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಹಾಗು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ (ನಾಳೆ) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಲ್ಯಾಂಡರ್ನಿಂದ ಹೊರಬಂದ ರೋವರ್ ಚಂದ್ರನ ಮೇಲೆ ನಡೆದಾಟ ಶುರು: ಚಂದ್ರನ ಮೇಲೆ ಮೂಡಲಿದೆ ಭಾರತದ ತ್ರಿವರ್ಣ ಧ್ವಜ