'ಹಲೋ ಡ್ಯಾಡಿ' ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ ನಿತಿನ್ ಗೋಪಿ ಇಂದು ನಿಧನರಾಗಿದ್ದಾರೆ. ಡಾ. ವಿಷ್ಣುವರ್ಧನ್ ಅಭಿನಯದ ಹಲೋ ಡ್ಯಾಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿತಿನ್ ಬಾಲನಟರಾಗಿ ಕನ್ನಡಿಗರ ಮನಗೆದ್ದಿದ್ದರು. ಅದರಲ್ಲೂ 'ಶಾಲೆಗೆ ಈ ದಿನ ರಜಾ' ಹಾಡಿನ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು.
ಸಿನಿಮಾ ಹಾಗೂ ಕಿರುತೆರೆಯಲ್ಲಿ ಬೇಡಿಕೆ ಹೊಂದಿದ್ದ ನಿತಿನ್ ಗೋಪಿ ಅವರಿಗೆ ಇಂದು ಮುಂಜಾನೆ 5 ಗಂಟೆಗೆ ಸುಮಾರಿಗೆ ತ್ರೀವ ಹೃದಯಾಘಾತ ಆಗಿದೆ. ಕೂಡಲೇ ನಟನ ಅಪ್ಪ ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ದಾರಿ ಮಧ್ಯೆಯೇ ನಿತಿನ್ ಇಹಲೋಕ ತ್ಯಜಿಸಿದ್ದಾರೆ ಎಂದು ಕಿರುತೆರೆ ಸಂಘದ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ನಲ್ಲಿ ನಿತಿನ್ ಅಪ್ಪ ಅಮ್ಮನ ಜೊತೆ ವಾಸವಿದ್ದರು. ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಬಾಲ ಕಲಾವಿದರಾಗಿ ನಟಿಸಿದ್ದರು. ಶ್ರುತಿ ನಾಯ್ಡು ಪ್ರೊಡಕ್ಷನ್ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು.
ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿಯನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಇವರು ಖ್ಯಾತ ಕೊಳಲು ವಾದಕ ಗೋಪಿ ಅವರ ಪುತ್ರ. ನಿತಿನ್ ಅಗಲಿಕೆಗೆ ಕಿರುತೆರೆ ಹಾಗು ಸಿನಿಮಾರಂಗದವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಏಷ್ಯಾ, ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸೇರಿದ 'ವಿಷ್ಣುವರ್ಧನ್ ಕಟೌಟ್ ಜಾತ್ರೆ'
ವಿಷ್ಣುವರ್ಧನ್ ಹೆಸರಲ್ಲಿ ಗೌರವವೊಂದು ಲಭ್ಯವಾಗಿದ್ದ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಈಗ ಆಘಾತವಾಗಿದೆ. ದಾದಾ ಜೊತೆ ನಟಿಸಿದ ನಟ ಸಾವನ್ನಪ್ಪಿದ್ದಾರೆ ಎಂಬ ವಿಚಾರ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 50 ವರ್ಷಗಳಾದ ಹಿನ್ನೆಲೆಯಲ್ಲಿ 2022 ರ ಸೆಪ್ಟೆಂಬರ್ 18 ರಂದು "ಕಟೌಟ್ ಜಾತ್ರೆ" ಎಂಬ ಕಾರ್ಯಕ್ರಮ ಆಯೋಜನೆಯಾಗಿತ್ತು.
ಬೆಂಗಳೂರಿನ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್ ಕಟೌಟ್‌ಗಳನ್ನು ಸ್ಥಾಪಿಸಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ವಿಷ್ಣು ಅವರ 50 ಸೇನಾನಿಗಳು, ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಿದ್ದರು. 40 ಲಕ್ಷ ರೂ. ಖರ್ಚಾಗಿದ್ದ ಈ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ಜನರು ಭಾಗವಹಿಸಿದ್ದರು.
ಈ ಕಟೌಟ್ ಜಾತ್ರೆ ವಿಚಾರ ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಸ್ತಕದ ಪುಟಗಳಲ್ಲಿ ದಾಖಲೆಯಾಗಿದೆ. ಈ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ನಟ ನಿತಿನ್ ಗೋಪಿ ನಿಧನ ಕಣ್ಣೀರು ತರಿಸಿದೆ.
ಇದನ್ನೂ ಓದಿ: ಚೇತನ್ ಗಡಿಪಾರು ಭೀತಿ: ಕೇಂದ್ರ ಸರ್ಕಾರದ ಆದೇಶದ ಮೇಲಿನ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ