ಭುವನೇಶ್ವರ್ (ಒಡಿಶಾ): 1,000 ಕೋಟಿ ರೂ.ಗಳ ಆನ್ಲೈನ್ ಪೊಂಜಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಾಲಿವುಡ್ ಸ್ಟಾರ್ ನಟ ಗೋವಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಒಡಿಶಾ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬುಧವಾರ ತಿಳಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪೊಂಜಿ ಹಗರಣದ ಜೊತೆ ಗೋವಿಂದ ಹೆಸರು ಸೇರಿಕೊಂಡಿದ್ದು, ಕಂಪನಿ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಕ್ಕಾಗಿ ತನಿಖೆ ನಡೆಸಲಾಗುವುದು ಎಂದು ಇಒಡಬ್ಲ್ಯು ತಿಳಿಸಿದೆ.
ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಟೆಕ್ನೋ ಅಲಯನ್ಸ್ (STA-Token) ಕಂಪನಿಯು ಕ್ರಿಪ್ಟೋಕರೆನ್ಸಿ ಹೂಡಿಕೆ ಹೆಸರಿನಲ್ಲಿ ಆನ್ಲೈನ್ ಪೊಂಜಿ ಯೋಜನೆ ನಡೆಸುತ್ತಿದೆ. ಇದರ ಭಾಗವಾಗಿ ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅನುಮತಿಯಿಲ್ಲದೇ, ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಭಾರಿ ಮೊತ್ತದ ಅನಧಿಕೃತ ಠೇವಣಿ ಸಂಗ್ರಹಿಸಿದೆ. ಈ ಮೂಲಕ ಸುಮಾರು 1,000 ಕೋಟಿ ರೂ. ವಂಚಿಸಲಾಗಿದೆ. ಈ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟ ಗೋವಿಂದ ಅವರನ್ನು ಇಒಡಬ್ಲ್ಯು ತನಿಖೆ ನಡೆಸಲಿದೆ.
ಈ ಕುರಿತು ಮಾಹಿತಿ ನೀಡಿರುವ ಇಒಡಬ್ಲ್ಯು ಇನ್ಸ್ಪೆಕ್ಟರ್ ಜನರಲ್ ಜೆ.ಎನ್ ಪಂಕಜ್, "ಗೋವಾದಲ್ಲಿ ಜುಲೈ ತಿಂಗಳಲ್ಲಿ ಎಸ್ಟಿಎ ಸಂಸ್ಥೆ (STA) ಹಮ್ಮಿಕೊಂಡಿದ್ದ ಅದ್ಧೂರಿ ಕಾರ್ಯಕ್ರಮಕ್ಕೆ ಗೋವಿಂದ ಯಾಕೆ ಹೋಗಿದ್ದರು ಮತ್ತು ಪ್ರಮೋಷನ್ ವಿಡಿಯೋಗಳಲ್ಲಿ ಯಾಕೆ ಕಾಣಿಸಿಕೊಂಡರು ಎಂಬುದರ ಬಗ್ಗೆ ನಟನಲ್ಲಿಯೇ ಮಾಹಿತಿ ಪಡೆಯಲು ನಮ್ಮ ತಂಡ ಸದ್ಯದಲ್ಲೇ ಮುಂಬೈಗೆ ತೆರಳಬಹುದು ಅಥವಾ ಗೋವಿಂದ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಬಹುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ಕೆಸಿಆರ್ ಪುತ್ರಿ ಕವಿತಾಗೆ ಮತ್ತೆ ಇಡಿ ನೋಟಿಸ್ ಜಾರಿ
ಅಲ್ಲದೇ, "ಕಂಪನಿಯ ಪ್ರಮೋಷನ್ ವಿಡಿಯೋದಲ್ಲಿ ನಟ ಗೋವಿಂದ ಕಾಣಿಸಿಕೊಂಡಿರುವುದರಿಂದ ಅವರು ಈ ಪ್ರಕರಣದಲ್ಲಿ ಆರೋಪಿಯೂ ಅಲ್ಲ, ಅಪರಾಧಿಯೂ ಅಲ್ಲ. ಅವರು ಕೇವಲ ಪ್ರಚಾರ ಮಾತ್ರ ಮಾಡುತ್ತಿದ್ದರು ಎಂದಾದಲ್ಲಿ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ನಟನ ಪಾತ್ರ ಕೇವಲ ಪ್ರಚಾರ ಮಾತ್ರ ಎಂದಾದಲ್ಲಿ ಅವರನ್ನು ಪ್ರಕರಣದ ಸಾಕ್ಷಿ ಎಂದು ಪರಿಗಣನೆ ಮಾಡಲಾಗುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 7ರಂದು ಇಒಡಬ್ಲ್ಯು, ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥ ಗುರುತೇಜ್ ಸಿಂಗ್ ಸಿಧು ಮತ್ತು ಒಡಿಶಾದ ಶಾಖೆಯ ಮುಖ್ಯಸ್ಥ ನಿರೋದ್ ದಾಸ್ ಅವರನ್ನು ಬಂಧಿಸಿತ್ತು. ಅಲ್ಲದೇ ಗುರುತೇಜ್ ಸಿಂಗ್ ಸಿಧು ಜೊತೆ ಒಡನಾಟ ಹೊಂದಿದ್ದ ಭುವನೇಶ್ವರದ ಹೂಡಿಕೆ ಸಲಹೆಗಾರ ರತ್ನಾಕರ್ ಪಲೈ ಅವರು ಆಗಸ್ಟ್ 16ರಂದು ಬಂಧನಕ್ಕೊಳಗಾದರು. ಅಲ್ಲದೇ ಈ ಹಗರಣದಲ್ಲಿ ಶಂಕಿತ ವ್ಯಕ್ತಿಗಳಾಗಿರುವ ಕಂಪನಿಯ ಸಿಇಒ, ಹಂಗೇರಿಯನ್ ಪ್ರಜೆಯಾದ ಡೇವಿಡ್ ಗೆಜ್ ಮತ್ತು ರಾಜಸ್ಥಾನದ ಇತರೆ ಮೂವರು ಭಾರತೀಯ ಅಧಿಕಾರಿಗಳಾದ ಕೃಷ್ಣ ಕುಮಾರ್, ಅನಿಲ್ ಕುಮಾರ್ ಹಾಗೂ ಭೂತಾ ರಾಮ್ ಅವರ ವಿರುದ್ಧ ಲುಕ್ಔಟ್ ಸುತ್ತೋಲೆ ಹೊರಡಿಸಲಾಗಿದೆ.
ಇದನ್ನೂ ಓದಿ: Nusrat Jahan: ಸಂಸದೆ, ನಟಿ ನುಸ್ರತ್ ಜಹಾನ್ ವಿರುದ್ಧ ವಂಚನೆ ಆರೋಪ: ಕೋರ್ಟ್, ಇಡಿ, ಪೊಲೀಸರಿಗೆ ದೂರು