ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಮಿಡಿ ಮಾಡುತ್ತಾ ಹೀರೋ ಪಾತ್ರ ನಿಭಾಯಿಸಿದ ನಟರಲ್ಲಿ ನಟ ಕೋಮಲ್ ಕುಮಾರ್ ಕೂಡ ಒಬ್ಬರು. ಕಾಲಾಯ ನಮಃ, ರೋಲೆಕ್ಸ್, ಉಂಡೆನಾಮ ಚಿತ್ರಗಳ ಬಳಿಕ ಕಮ್ ಬ್ಯಾಕ್ ಮಾಡಿರುವ ಇವರೀಗ ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ "ನಮೋ ಭೂತಾತ್ಮ 2" ಚಿತ್ರದ ಜಪ ಮಾಡುತ್ತಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಬಲ ಸಿಕ್ಕಿದೆ.
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ನಮೋ ಭೂತಾತ್ಮ 2 ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನೃತ್ಯ ನಿರ್ದೇಶಕ ಮುರಳಿ ನಿರ್ದೇಶನ ಹಾಗೂ ಕೋಮಲ್ ಅಭಿನಯದ ಚಿತ್ರದ ಟೀಸರ್ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡುವ ಮೂಲಕ ಕೋಮಲ್ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.
ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ಧ್ರುವ ಸರ್ಜಾ, "ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ಚಿತ್ರದ ಬಿಡುಗಡೆಗೂ ಕಾಯುತ್ತಿದ್ದೇನೆ. ಮುರಳಿ ಮಾಸ್ಟರ್ ಅವರು ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. "ನಮೋ ಭೂತಾತ್ಮ 2" ಸೂಪರ್ ಹಿಟ್ ಆಗಲಿ" ಎಂದು ಹರಸಿದರು.
ಕೋಮಲ್ ಮಾತನಾಡಿ, "ನಾನು ನಿರ್ಮಿಸಿ ನಟಿಸಿದ್ದ ಮುರಳಿ ಮಾಸ್ಟರ್ ನಿರ್ದೇಶಿಸಿದ್ದ "ನಮೋ ಭೂತಾತ್ಮ" ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ "ನಮೋ ಭೂತಾತ್ಮ 2" ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಬರುತ್ತಿದೆ. ಮೊದಲ ಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾರಿಗೆ ಧನ್ಯವಾದ" ಎಂದರು.
ನೃತ್ಯ ನಿರ್ದೇಶಕ ಹಾಗು ಚಿತ್ರ ನಿರ್ದೇಶಕ ಮುರಳಿ ಮಾತನಾಡಿ, "2014ರಲ್ಲಿ ನನಗೆ ಕೋಮಲ್ ಅವರು "ನಮೋ ಭೂತಾತ್ಮ" ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ "ನಮೋ ಭೂತಾತ್ಮ 2" ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲೇ ಚಿತ್ರಕಥೆ ಸಿದ್ದ ಮಾಡಿಕೊಂಡಿದ್ದೆ. ಆನಂತರ ಕೋಮಲ್ ಅವರಿಗೆ ನಾನು ಹಾಗೂ ಸಂತೋಷ್ ಹೋಗಿ ಚಿತ್ರದ ಕಥೆ ಹೇಳಿದ್ದೆವು. ಕೋಮಲ್ ನಟಿಸಲು ಒಪ್ಪಿದರು. ಚಿತ್ರಕ್ಕೆ "ನಮೋ ಭೂತಾತ್ಮ 2" ಎಂದು ಹೆಸರಿಟ್ಟೆವು. ನನ್ನ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ" ಎಂದರು.
ಯುವ ನಟಿ ಲೇಖಾ ಚಂದ್ರ ಅಭಿನಯಿಸಿದ್ದಾರೆ. ಜಿ.ಜಿ. ಮೋನಿಕಾ, ವರುಣ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ನಿರ್ಮಾಪಕ ಸಂತೋಷ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Roopesh Shetty 'ಸರ್ಕಸ್' ಸಕ್ಸಸ್; 'ಬಿಗ್ ಬಾಸ್' ವಿನ್ನರ್ಗೆ ಸ್ಪರ್ಧಿಗಳು ಸಾಥ್, ಸಿಂಪಲ್ ಸುನಿ ಪ್ರಶಂಸೆ