ಶಿವಮೊಗ್ಗ: ಮದುವೆಗೆ ಮುನ್ನವೇ ಯುವತಿಯೋರ್ವಳು ಗರ್ಭವತಿಯಾಗಿ ಅವಧಿಗೂ ಮೊದಲೇ ಹರಿಗೆಯ ವೇಳೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಸುದ್ದಿಯ ವಿವರ:
ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದ ಯುವತಿ ಗಣಪತಿ ಹಬ್ಬಕ್ಕೆಂದು ಊರಿಗೆ ಬಂದಿದ್ದಳು. ಮಗಳ ದೇಹದಲ್ಲಾದ ಬದಲಾವಣೆ ಗಮನಿಸಿದ ತಾಯಿ ಈ ಕುರಿತು ಪ್ರಶ್ನಿಸಿದಾಗ ಆಕೆ ಸತ್ಯ ಮರೆಮಾಚಿ ತಪ್ಪಿಸಿಕೊಳ್ಳುತ್ತಿದ್ದಳಂತೆ. ನಂತರ ತನಗೆ ಹೊಟ್ಟೆ ನೋವೆಂದು ಯುವತಿ ಒಬ್ಬಳೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಈ ವೇಳೆ ತಾನು 7 ತಿಂಗಳ ಗರ್ಭಿಣಿ ಎಂದು ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಸ್ಕ್ಯಾನಿಂಗ್ ನಡೆಸಿ ನೋಡಿದಾಗ ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇದೇ ವೇಳೆ ಯುವತಿಯೂ ಸಹ ತೀವ್ರ ರಕ್ತಸ್ರಾವದಿಂದ ಬಳಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಪೊಲೀಸರು ಯುವತಿಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.
ಮೃತ ಯುವತಿ ಭದ್ರಾವತಿ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಮೃತ ಯುವತಿಯ ಮಗುವಿನ ತಂದೆ ಯಾರು ಎಂದು ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.