ಮಂಗಳೂರು: ಗಾಂಜಾ ಸಾಗಣೆ ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡು ಹೊರಬಂದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಜಿಪ ಮುನ್ನೂರು ಗ್ರಾಮದ ನಿವಾಸಿ ಜಾಕಿರ್ ಹುಸೇನ್ ಅಲಿಯಾಸ್ ತಾಜಿ (29) ಬಂಧಿತ.
2017ರಲ್ಲಿ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಈತನನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯದಿಂದ ಜಾಮೀನನ್ನು ಪಡೆದುಕೊಂಡಿದ್ದ ಆರೋಪಿ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು 5 ವರ್ಷಗಳ ಬಳಿಕ ಬಜ್ಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಜಾಕಿರ್ ಹುಸೇನ್ ಮೇಲೆ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಸೇರಿ ಒಟ್ಟು ಮೂರು ಪ್ರಕರಣ, ಬಂದರು ಠಾಣೆಯಲ್ಲಿ ಎರಡು ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ ಎರಡು ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಆರೋಪಿಯನ್ನು ಬಜಪೆ ಠಾಣಾ ಪಿಎಸ್ಐ ಗುರು ಕಾಂತಿ, ಹೆಡ್ ಕಾನ್ಸ್ಟೇಬಲ್ ರೋಹಿತ್ ಪಾವಂಜೆ ಅವರು ಪತ್ತೆ ಹಚ್ಚಿ, ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇಲಿ ವಿಚಾರಕ್ಕೆ ಜಟಾಪಟಿ.. ಠಾಣೆ ಮೆಟ್ಟಿಲೇರಿದ ಅಪಾರ್ಟ್ಮೆಂಟ್ ನಿವಾಸಿಗಳು!