ಕೊಚ್ಚಿ (ಕೇರಳ): ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿ, ಕೈ ಮುರಿದ ಆರೋಪ ಎದುರಿಸುತ್ತಿರುವ ಶಿಕ್ಷಕಿಯನ್ನು ಬಂಧಿಸಬೇಡಿ ಎಂದು ಪೊಲೀಸರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ಫೆಬ್ರವರಿ 17 ರಂದು ಕೊಚ್ಚಿಯ ಕುಟ್ಟಮಾಸ್ಸೆರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗೆ ಮರಿಯಮ್ಮ ಎಂಬ ಗಣಿತ ಶಿಕ್ಷಕಿ ಕಬ್ಬಿನಿಂದ ಹೊಡೆದಿದ್ದರು. ಪರಿಣಾಮ, ಬಾಲಕನ ಕೈ ಮುರಿದು ಹೋಗಿದೆಯೆಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ಶಿಕ್ಷಕಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: WATCH: ಹೊಸಪೇಟೆ ಕೋರ್ಟ್ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ
ಈ ಸಂಬಂಧ ಮರಿಯಮ್ಮ ಕೇರಳ ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಫೆ. 17 ರಂದು ಬೆಳಗ್ಗೆ 9.30 ಗಂಟೆಗೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಆ ದಿನ ಮಧ್ಯಾಹ್ನ ಹಾಗೂ ನಂತರದ ದಿನಗಳಲ್ಲಿ ನಡೆಸಿದ ಪರೀಕ್ಷೆಗಳಿಗೆ ಹಾಜರಾಗಿದ್ದನು ಎಂದು ಮರಿಯಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ.ಶಿರ್ಸಿ ವಿ ನೇತೃತ್ವದ ನ್ಯಾಯಪೀಠವು ಶಿಕ್ಷಕಿಯನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿದೆ.