ಹೈದರಾಬಾದ್: ಆಸ್ಪತ್ರೆಯಲ್ಲಿದ್ದ ಪತಿಯ ನೆರವಿಗೆ ಬಂದಿದ್ದ ಪತ್ನಿ ಹಾಗೂ ಆಕೆಯ ತಂಗಿಯ ಮೇಲೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಹೈದರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪುತ್ರ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಚಿಕಿತ್ಸೆಗೆಂದು ಬಂದಿದ್ದ ತಾಯಿ ಹಾಗೂ ಚಿಕ್ಕಮ್ಮ ಆಸ್ಪತ್ರೆಯಲ್ಲಿ ಇರಲಿಲ್ಲ. ಇಬ್ಬರನ್ನು ಹುಡುಕಾಡಿದಾಗ ಆಕೆಯ ಚಿಕ್ಕಮ್ಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ಆಕೆಯನ್ನು ಮೆಹಬೂಬನಗರಕ್ಕೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ನಡೆದಿರುವ ದೌರ್ಜನ್ಯ ವಿವರಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಲಕಲುಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಬಂಧಿಕರ ಸಹಾಯಕ್ಕಾಗಿ ಬಂದಿದ್ದಾಗ ಕೃತ್ಯ
ಮೆಹಬೂಬನಗರ ಜಿಲ್ಲೆಯ ವ್ಯಕ್ತಿಯನ್ನು ಆಗಸ್ಟ್ 5 ರಂದು ಮೂತ್ರಪಿಂಡ ಕಾಯಿಲೆಯ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಮತ್ತು ಆಕೆಯ ಸಹೋದರಿ ರೋಗಿಗೆ ಸಹಾಯಕ್ಕಾಗಿ ಆಸ್ಪತ್ರೆಗೆ ಬಂದಿದ್ದರು. ಆದರೆ ಆಗಸ್ಟ್ 8 ರಂದು ಸಹೋದರಿಯರು ಕಾಣೆಯಾಗಿದ್ದಾರೆ. ಆಸ್ಪತ್ರೆಯ ರೇಡಿಯೋಗ್ರಾಫರ್, ಆರೋಪಿ ಉಮಾಮಹೇಶ್ವರ್ ಮಹಿಳೆಯ ಸಂಬಂಧಿಯಾಗಿದ್ದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: #JeeneDo: ಗೋವಾದಲ್ಲಿ ಅಪ್ರಾಪ್ತರ ಮೇಲೆ ಸಾಮೂಹಿಕ ಅತ್ಯಾಚಾರ ವಿಚಾರ.. ಗೋವಾ ಸಿಎಂ ಹೇಳಿಕೆ ವಿರುದ್ಧ ಅಭಿಯಾನ
ಉಮಾಮಹೇಶ್ವರ್ ಈ ತಿಂಗಳ 8ರಂದು ಮಹಿಳೆಯರನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ವೈನ್‌ನಲ್ಲಿ ಮಾದಕ ದ್ರವ್ಯ ಬೆರೆಸಿ ಕುಡಿಸಿದ್ದಾನೆ. ಅವರು ಪ್ರಜ್ಞಾಹೀನ ಸ್ಥಿತಿಗೆ ಹೋದ ನಂತರ ಉಮಾಮಹೇಶ್ವರ ಇತರರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪವಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮ್ಮ ತಾಯಿ ಹಾಗೂ ಚಿಕ್ಕಮ್ಮನನ್ನು ಕೊಲ್ಲುವುದಾಗಿ ಸಂತ್ರಸ್ತೆಯ ಪುತ್ರನಿಗೆ ಬೆದರಿಕೆ ಹಾಕಿದ್ದನಂತೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಆರೋಪಿ ಉಮಾಮಹೇಶ್ವರ್ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಇನ್ನೊಬ್ಬ ಮಹಿಳೆ ನಾಪತ್ತೆಯಾಗಿದ್ದು, ಆಕೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಉಮಾಮಹೇಶ್ವರ್ ಮತ್ತು ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಅಧೀಕ್ಷಕ ಡಾ.ರಾಜಾರಾವ್ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.