ತುಮಕೂರು: ಇಲ್ಲಿ ಆಯೋಜಿಸಿರುವ ಕೃಷಿ ಸಮ್ಮಾನ್ ಕಾರ್ಯಕ್ರಮವನ್ನು (ರೈತ ಸಮಾವೇಶ) ಪ್ರಧಾನಿ ನರೇಂದ್ರ ಮೋದಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ಧನ್ಯವಾದ. ಹಾಗೆಯೇ ಎಲ್ಲರಿಗೂ ನೂತನ ಸಂವತ್ಸರ ಹಾಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಅನ್ನದಾತನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ಧನ್ಯ ಎಂದು ರೈತರನ್ನು ಹಾಡಿ ಹೊಗಳಿಸಿದರು.
ದೇಶಕ್ಕೆ ಅನ್ನ ನೀಡುವ ರೈತನಿಗೆ ನಾನು ಅಭಾರಿಯಾಗಿದ್ದೇನೆ. ಇಂದು ಕರ್ನಾಟಕದ ಭೂಮಿಯಿಂದ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ರೈತರಿಗೆ ಕೃಷಿ ಕರ್ಮಣ ಪ್ರಶಸ್ತಿಗೆ ನನಗೆ ಅತೀವ ಸಂತೋಷ ತಂದಿದೆ. ತಮಿಳುನಾಡು, ಕರ್ನಾಟಕ ಮೀನುಗಾರರಿಗೆ ವಿಶೇಷ ಸಲಕರಣೆಗಳನ್ನು ನೀಡುತ್ತಿದ್ದೇವೆ.
8 ಕೋಟಿ ಕೃಷಿಕರಿಗೆ ಒಂದೇ ಸಮಯದಲ್ಲಿ 12 ಕೋಟಿ ಜಮಾ ಆಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಎಲ್ಲಾ ರಾಜ್ಯಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಯೋಜನೆ ಆ ಪಕ್ಷ, ಈ ಪಕ್ಷ ಅಲ್ಲ, ರೈತರದ್ದು ಎಂದು ಹೇಳಿದರು.
ಈ ಒಂದು ಯೋಜನೆಯಿಂದ ಎಲ್ಲಾ ರಾಜ್ಯಗಳೂ ಕೂಡಾ ಜೋಡಣೆಯಾಗುತ್ತವೆ. ಕೃಷಿಕರಿಗೆ ಸಂಬಂಧಿಸಿದ ಯೋಜನೆಗಳಿಗೆ ನಾವು ಆದ್ಯತೆ ನೀಡಿದ್ದೇವೆ. ಬಹುಬೇಡಿಕೆ ಇದ್ದ ಎಂಎಸ್ಪಿಯನ್ನು ನಾವು ಜಾರಿಗೊಳಿಸಿದ್ದೇವೆ. ಭವಿಷ್ಯದ ಸಮಸ್ಯೆಯನ್ನು ಕೂಡಾ ಪರಿಹಾರ ಮಾಡಲು ಗಮನಹರಿಸಿದ್ದೇವೆ ಎಂದು ಹೇಳಿದರು.
ದೇಶದ ಯಾವುದೇ ಭಾಗದಲ್ಲಿ ರೈತ ತನ್ನ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಇಂದು ಅನ್ನದಾತ ಉದ್ಯೋಗದಾತನಾಗಿ ಬದಲಾಗುತ್ತಿದ್ದಾನೆ. ಹೈನುಗಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ತಮ್ಮ ಭೂಮಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ರೈತರು ಉತ್ಪಾದಿಸಿದ ಸೋಲಾರ್ ವಿದ್ಯುತ್ ಅನ್ನು ಕೊಳ್ಳುವುದಕ್ಕೂ ವ್ಯವಸ್ಥೆಮಾಡಲಾಗಿದೆ ಎಂದರು.
ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಭಾರತ ಹೊಂದಿದೆ. ಅದಕ್ಕೆ ಕೃಷಿ ವಲಯವೂ ಪ್ರಮುಖ. ರಪ್ತು ಮಾಡುವಲ್ಲಿ ದಕ್ಷಿಣ ಭಾರತ ಅಮೂಲಾಗ್ರ ಕೊಡುಗೆ ನೀಡಿದೆ. ಇದಕ್ಕೆ ಕಾರಣ ಇಲ್ಲಿನ ಮಣ್ಣು ಹಾಗೂ ಕರಾವಳಿ ಪ್ರದೇಶ. ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳು ಕೃಷಿಯಲ್ಲಿ ಮುಂದಿವೆ ಎಂದು ಹೇಳಿದರು.
ರೈತರ ಉತ್ಪನ್ನಗಳ ಮಾರಾಟಕ್ಕೆ ಯೋಜನೆ, ರೈತರ ಉತ್ಪನ್ನಗಳ ಶೀತಸಂಗ್ರಹ, ಕಡಿಮೆ ದರದಲ್ಲಿ ಮೇವು, ಕೃಷಿ ಬೆಳೆಗಳಿಗೆ ಕ್ಲಸ್ಟರ್ಗಳನ್ನು ನಿರ್ಮಿಸಲಾಗುವುದು. ಬೆಳಗಾವಿಯ ದಾಳಿಂಬೆ, ಚಿಕ್ಕಬಳ್ಳಾಪುರರ ಗುಲಾಬಿ, ಕೊಡಗಿನ ಸಾಂಬಾರು ಪದಾರ್ಥಗಳು ಉತ್ಪಾದನೆ ದುಪ್ಪಾಟ್ಟಾಗಿದೆ. ಅಲ್ಲದೆ, ಮತ್ತಷ್ಟು ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತೆಲಂಗಾಣ ಅರಿಶಿಣ ಉತ್ಪಾದಿಸುವ ಹಬ್ ಆಗಿದೆ. ದಕ್ಷಿಣ ಭಾರತದಲ್ಲಿ ತೆಂಗು -ಕಾಫಿಗೆ ಗೊಂಡಂಬಿಗೆ ತೆಂಗು ಕೃಷಿಕರ ಸೊಸೈಟಿ ರಚಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರದ ವಿಶೇಷ ಪ್ರಯತ್ನದಿಂದಾಗಿ 25 ಲಕ್ಷ ಟನ್ಗಿಂತ ಹೆಚ್ಚು ಮೌಲ್ಯದ ಮಸಾಲೆ ಪದಾರ್ಥಗಳು ಉತ್ಪನ್ನವಾಗಿವೆ. 15 ಸಾವಿರ ಕೋಟಿಯಿಂದ 20 ಸಾವಿರ ಕೋಟಿಯಷ್ಟು ಉತ್ಪನ್ನಗಳು ರಫ್ತಾಗಿದೆ. ಅರಿಶಿಣದ ಉತ್ಪಾದನೆಯಲ್ಲಿ ಕೂಡಾ ಭಾರತ ಮುಂದಿದೆ ಎಂದು ಹೇಳಿದರು.
ತೋಟಗಾರಿಕೆ ಜೊತೆಗೆ ಬೇರೆ ಬೇರೆ ರೀತಿಯ ಬೆಳೆಗಳನ್ನು ಬೆಳೆಯುವಲ್ಲಿ ಕೂಡಾ ಕರ್ನಾಟಕದ ಪಾತ್ರ ದೊಡ್ಡದು. ದಕ್ಷಿಣ ಭಾರತದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ದೊಡ್ಡ ಅವಕಾಶವಿದೆ. ಹಳ್ಳಿಗಳಲ್ಲಿ ಮೀನುಗಾರಿಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ನೀಲಿ ಕ್ರಾಂತಿಗಾಗಿ ಹೆಚ್ಚಿನ ಆದ್ಯತೆ ನೀಡಿ, ಮೀನುಗಾರಿಕೆ ಅಭಿವೃದ್ದಿಪಡಿಸಲಾಗುತ್ತದೆ. ಕೇಂದ್ರದಿಂದ ಕಿಸಾನ್ ಕಾರ್ಡ್ ಕೊಡುವ ಯೋಜನೆಯನ್ನು ಕೂಡಾ ರೂಪಿಸಲಾಗಿದೆ. ಮೀನುಗಾರಿಕೆ ಬಂದರನ್ನು ಕೂಡಾ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸರ್ಕಾರದ ಮೂಲಕ ಬೋಟ್ಗಳ ಆಧುನೀಕರಣಕ್ಕೆ ಎರಡೂವರೆ ಸಾವಿರ ಕೋಟಿ ನೀಡಲಾಗಿದೆ. ತಮಿಳುನಾಡು ಹಾಗೂ ಕರ್ನಾಟಕ ಅನೇಕ ರೈತರಿಗೆ ಲಾಭವಾಗಿದೆ. ಇಸ್ರೋದಿಂದ ವಿಶೇಷ ಉಪಕರಣವನ್ನು ಅಭಿವೃದ್ಧಿಪಡಿಸಿ ಮೀನುಗಾರರಿಗೆ ನೀಡಲಾಗಿದೆ.
ಪ್ರಸ್ತುತ ಇರುವ ಜಲಸಂಕಷ್ಟ ನಿವಾರಿಸಲು ಜಲಜೀವನ್ ಮಿಷನ್ ರೂಪಿಸಲಾಗಿದೆ. ಅಟಲ್ ಭೂಜಲ ಯೋಜನೆಯನ್ನೂ ಕೂಡಾ ಜಾರಿಗೊಳಿಸಲಾಗಿದೆ. ಈ ಮೂಲಕ ದೇಶದ ಏಳು ರಾಜ್ಯಗಳಲ್ಲಿ ಅಂತರ್ಜಲವನ್ನು ಮೇಲೆತ್ತಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಕರ್ಮಣ್ಯ ಪ್ರಶಸ್ತಿಯನ್ನು ಬೇರೆ ಕ್ಷೇತ್ರಗಳಿಗೂ ಕೂಡಾ ವಿಸ್ತರಿಸಬೇಕೆಂದು ಅನ್ನಿಸುತ್ತಿದೆ ಎಂದರು.
2022ರಲ್ಲಿ ಭಾರತ ಸ್ವತಂತ್ರಗೊಂಡು 75 ವರ್ಷ ಆಗಲಿದೆ. ನಾವು ಕೃಷಿಕರು ನಮ್ಮ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಸಂಕಲ್ಪ ಕೈಗೊಳ್ಳಬೇಕು. ಈ ಮೂಲಕ ನಮ್ಮ ಹಿರಿಯರಿಗೆ ಗೌರವ ಸಲ್ಲಿಸಬಹುದಾಗಿದೆ. ನನಗೆ ಎಲ್ಲಾ ಸಂಕಲ್ಪ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಭಾಷಣ ಮುಗಿಸಿದರು.
ಪ್ರಶಸ್ತಿ ಪಡೆದವರಿಗೂ ಹಾಗೂ ಎಲ್ಲಾ ಅನ್ನದಾತರಿಗೂ ಶುಭಾಶಯಗಳು... ಜೈ ಜವಾನ್, ಜೈ ಕಿಸಾನ್...ಎಂದು ವೇದಿಕೆಯಿಂದ ಹೊರಟರು.