ತುಮಕೂರು : ತುಮಕೂರು ಜಿಲ್ಲೆಯಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. 2017-18ರಲ್ಲಿ 760 ಮಂದಿ ಹೆಚ್ಐವಿ ಸೋಂಕಿತರಿದ್ದಾರೆ. 18-19ರಲ್ಲಿ 711ಕ್ಕೆ ಇಳಿಕೆಯಾಗಿತ್ತು.
2019-20ರಲ್ಲಿ 662ರಷ್ಟು ಸೋಂಕಿತರು ಕಂಡು ಬಂದಿದ್ದರು. ಇನ್ನು 2021ರ ಏಪ್ರಿಲ್ನಿಂದ 2021ರವರೆಗೆ 202 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.
ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಹೆಚ್ಐವಿ ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತಾಗಿದೆ. ಹೆಚ್ಐವಿ ಸೋಂಕು ತಡೆಗೆ ಯಾವ ಲಸಿಕೆಯೂ ಇಲ್ಲ.
ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಹೆಚ್ಐವಿ ತಡೆಗಟ್ಟಲು ಇರುವ ಏಕೈಕ ಮಾರ್ಗ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಹೆಚ್ಐವಿ ನಿಯಂತ್ರಣಕ್ಕೆ ಕ್ರಮ : ಜಿಲ್ಲೆಯಲ್ಲಿ 2008ರಲ್ಲಿ ಏಡ್ಸ್ ನಿಯಂತ್ರಣ ಘಟಕ ಅಸ್ತಿತ್ವಕ್ಕೆ ಬಂದಿತ್ತು. 30 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು, ಸಹಾಯಕರಿದ್ದಾರೆ. ಜಿಲ್ಲೆಯಲ್ಲಿ 17 ಕೇಂದ್ರಗಳಿವೆ. 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 15 ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಈ ಕೇಂದ್ರಗಳಲ್ಲಿ 25 ಮಂದಿ ಆಪ್ತ ಸಮಾಲೋಚಕರು ಮತ್ತು 19 ಮಂದಿ ಪ್ರಯೋಗಶಾಲಾ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆ, ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರ ಮತ್ತು 12 ಕಡೆ ಲಿಂಕ್ ಎಆರ್‌ಟಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಈ ಕೇಂದ್ರದಲ್ಲಿ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳಿವೆ. ಸೋಂಕಿತರಿಗೆ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಸನತ್.
ಇದನ್ನೂ ಓದಿ: ಟಿಕೆಟ್ ರಹಿತ ಪ್ರಯಾಣಿಕರಿಂದ 4 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ: ಬಿಎಂಟಿಸಿ