ತುಮಕೂರು: ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಟಿ ಬಿ ಜಯಚಂದ್ರ ಹಾಗೂ ನಾನು ಜೋಡೆತ್ತುಗಳಾಗಿ ಕೆಲಸ ಮಾಡುತ್ತೇವೆ. ನಾವಿಬ್ಬರೂ ಒಂದೇ ಬಣ್ಣ ಒಂದೇ ವಯೋಮಾನದವರು. ಆದರೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ ಜೋಡೆತ್ತುಗಳು ಒಂದು ಕರಿ ಎತ್ತು ಇನ್ನೊಂದು ಬಿಳಿ ಎತ್ತು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಲೇವಡಿ ಮಾಡಿದ್ದಾರೆ.
ಉಪಚುನಾವಣೆ ಹಿನ್ನೆಲೆ ಇಂದು ತುಮಕೂರಿನ ಕೆ ಎನ್ ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಚುನಾವಣೆ ಕುರಿತು ಮಾತುಕತೆ ನಡೆಸಿದರು. ಎರಡು ಬೇರೆ ಬಣ್ಣದ ಜೋಡೆತ್ತುಗಳು ಒಟ್ಟಿಗೆ ಸೇರಿದರೆ ಸರಿಹೊಂದುವುದಿಲ್ಲ ಎಂದು ಮಂಡ್ಯ ಲೋಕಸಭೆ ಚುನಾವಣೆಯಲ್ಲಿನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುರಿತು ವ್ಯಾಖ್ಯಾನ ಮಾಡಿದರು.
ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಕ್ಷೇತ್ರದ ರೈತರಿಗೆ ಸಹಾಯಕವಾಗುವಂತಹ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು. ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಮಗೆ ಶತ್ರು ಪಕ್ಷಗಳು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ.
ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಾಗಲಿದೆ. ಆದರೆ ಕನಿಷ್ಠ ಹತ್ತು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಜೆಡಿಎಸ್ ನಿಂದ ಕುಮಾರಸ್ವಾಮಿಯವರೇ ಬರಲಿ, ದೇವೇಗೌಡರೇ ಸ್ಪರ್ಧಿಸಲಿ. ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುವುದು ಎಂದರು.