ಶಿವಮೊಗ್ಗ : ಕಾಂಗ್ರೆಸ್‌ನವರಿಗೆ ಉದ್ಯೋಗ ಬೇಕು ಅಂದ್ರೆ ಅವರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಡಿ ಉದ್ಯೋಗ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನಿನ್ನೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದಕ್ಕೆ ಟಾಂಗ್ ನೀಡಿದ್ದಾರೆ.
ಇಂದು ಶಿವಮೊಗ್ಗದ ಯಡಿಯೂರಪ್ಪ ಅವರ ನಿವಾಸದಲ್ಲಿ ಮಾತನಾಡಿದ ವಿಜಯೇಂದ್ರ, ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾದ ನಂತರ ಕಾಂಗ್ರೆಸ್ಗೆ ನಿರುದ್ಯೋಗ ಕಾಡಲು ಪ್ರಾರಂಭಿಸಿದೆ. ಮೋದಿಯವರು ದೇಶ ಮೆಚ್ಚಿದ ನಾಯಕರಷ್ಟೇ ಅಲ್ಲ, ಪ್ರಪಂಚ ಮೆಚ್ಚಿದ ನಾಯಕರಾಗಿದ್ದಾರೆ.
ನಿನ್ನೆ ದಿನ ಇಂತಹ ಮಹಾನ್ ನಾಯಕನ ಜನ್ಮ ದಿನವನ್ನು ನಾವು ಸೇವಾ ದಿನವನ್ನಾಗಿ ಆಚರಣೆ ಮಾಡಿದ್ರೆ, ಕಾಂಗ್ರೆಸ್ನವರು ನಿರುದ್ಯೋಗ ದಿನವನ್ನಾಗಿ ಆಚರಿಸಿದ್ದು ಸರಿಯಲ್ಲ ಎಂದು ಕಿಡಿ ಕಾರಿದರು.
ಬೆಲೆ ಏರಿಕೆ ಬಿಜೆಪಿ ಅಧಿಕಾರಕ್ಕೆ ಬಂದು ಮಾಡಿದಲ್ಲ. 65 ವರ್ಷ ಕಾಂಗ್ರೆಸ್ ಆಡಳಿತ ನಡೆಸಿ, ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇರುವುದೇ ಇಂದಿನ ಬೆಲೆ ಏರಿಕೆಗೆ ಕಾರಣವಾಗಿದೆ. ಕಾಂಗ್ರೆಸ್ನವರು ಅಸ್ತಿತ್ವ ಕಳೆದುಕೊಂಡಿದ್ದಾರೆ. ಅವರಿಗೆ ತಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಇನ್ನೂ ಆಗಿಲ್ಲ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ದಾವಣಗೆರೆಯಲ್ಲಿ ಇಂದು ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ನಾಳೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮುಂಬರುವ ಹಾನಗಲ್ ಹಾಗೂ ಸಿದಂಗಿ ಉಪ ಚುನಾವಣೆ, ಪರಿಷತ್ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಗುವುದು. ಸಭೆಗೆ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ಭಾಗಿಯಾಗಲಿದ್ದಾರೆ ಎಂದರು.
ಸಚಿವ ಸ್ಥಾನ ನೀಡಬೇಕೆಂಬ ಪ್ರಸ್ತಾಪವಿಲ್ಲ : ನನಗೆ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪನವರು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಆ ಬಗ್ಗೆ ಚರ್ಚೆ ಸಹ ನಡೆದಿಲ್ಲ. ನಾನು ಬಿಜೆಪಿಯ ರಾಜ್ಯ ಉಪಾಧ್ಯಕ್ಷನಾಗಿದ್ದೇನೆ.
ನನ್ನ ಕೆಲಸ ಗುರುತಿಸಿ ನಾನು ಎಲ್ಲಿ ಸ್ಪರ್ಧೆ ಮಾಡಬೇಕೆಂದು ಪಕ್ಷ ತಿಳಿಸುತ್ತದೆ. ಯಡಿಯೂರಪ್ಪನವರ ಹೋರಾಟ ರಾಜ್ಯದ ಜನತೆಗೆ ತಿಳಿದಿದೆ. ಅವರು ಅಧಿಕಾರ ಇರಲಿ, ಬಿಡಲಿ ಅವರು ಹೋರಾಟ ನಡೆಸುತ್ತಲೇ ಇರುತ್ತಾರೆ ಎಂದು ವಿಜಯೇಂದ್ರ ಹೇಳಿದರು.