ಶಿವಮೊಗ್ಗ: ಶಿವಮೊಗ್ಗ ಬಿಜೆಪಿಯ ಶಕ್ತಿಕೇಂದ್ರ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರನ್ನು ಬಿಜೆಪಿ ಗೆದ್ದಿದೆ. ಆರು ಕ್ಷೇತ್ರಗಳಲ್ಲಿ ಗೆದ್ದವರೂ ಘಟಾನುಘಟಿ ನಾಯಕರುಗಳೇ. ಶಿಕಾರಿಪುರದಿಂದ ಗೆದ್ದಿದ್ದ ಯಡಿಯೂರಪ್ಪ ಸಿಎಂ ಆಗಿದ್ದರೆ, ಶಿವಮೊಗ್ಗದಿಂದ ಗೆದ್ದಿದ್ದ ಈಶ್ವರಪ್ಪ ಸಚಿವರಾಗಿದ್ದರು.
ಇದೀಗ ಈಶ್ವರಪ್ಪ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಕೇಳಿಬರುತ್ತಿದ್ದು, ಇದರ ಜೊತೆಗೆ ಜಿಲ್ಲೆಯಿಂದ ಗೆದ್ದಿರುವ ಏಕೈಕ ಒಕ್ಕಲಿಗ ಶಾಸಕ ಆರಗ ಜ್ಞಾನೇಂದ್ರಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹವೂ ಇದೆ.
ಈ ಕುರಿತು ಮಾತನಾಡಿದ ಕೆಂಪೇಗೌಡ ಒಕ್ಕಲಿಗ ಸಂಘದ ಮುಖಂಡ ಸತ್ಯಾನಾರಾಯಣ, ಯಡಿಯೂರಪ್ಪ ಅವರೊಂದಿಗೆ ಬೆಳೆದು ಬಂದವರು ಕೆ.ಎಸ್.ಈಶ್ವರಪ್ಪ. ಕಳೆದ 30 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಈಶ್ವರಪ್ಪ ಅವರ ಪಾಲೂ ಇದೆ. ಹೀಗಾಗಿ, ಅವರನ್ನು ಸಚಿವರನ್ನಾಗಿ ಮಾಡುವ ಜೊತೆಗೆ ಡಿಸಿಎಂ ಪಟ್ಟವನ್ನೂ ನೀಡಬೇಕು ಎಂದರು.
ಒಕ್ಕಲಿಗ ಒಕ್ಕೂಟದ ಮುಖಂಡ ಗೋ.ರಮೇಶ್ ಗೌಡ ಮಾತನಾಡಿ, ಜಿಲ್ಲೆಯ ಪ್ರಭಾವಿ ನಾಯಕರಾದ ಕೆ.ಎಸ್.ಈಶ್ವರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಅದೇ ರೀತಿ ಜಿಲ್ಲೆಯ ಏಕೈಕ ಒಕ್ಕಲಿಗ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಇದುವರೆಗೆ ಯಾವುದೇ ಅಧಿಕಾರ ನೀಡಿಲ್ಲ. ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಕೈಗಾರಿಕೋದ್ಯಮಿ ಎಂ.ಎ.ರಮೇಶ್ ಹೆಗಡೆ ಮಾತನಾಡಿ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರು ಈ ಹಿಂದೆ ನಮ್ಮ ಚೇಂಬರ್ನ ಅಧ್ಯಕ್ಷರಾಗಿದ್ದರು. ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಸಾಕಷ್ಟು ನೆರವು ನೀಡಿದ್ದಾರೆ ಎಂದರು.
ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ಪೊಲೀಸ್ ಸಿಬ್ಬಂದಿ ಕೈ ಕಚ್ಚಿದ ಮಹಿಳೆ