ಶಿವಮೊಗ್ಗ: ನೈಋತ್ಯ ರೈಲ್ವೆ ಮೊದಲ ಬಾರಿಗೆ ಬೆಂಗಳೂರು-ಶಿವಮೊಗ್ಗ ನಡುವಿನ ರೈಲಿಗೆ ಪ್ರಾಯೋಗಿಕವಾಗಿ ವಿಸ್ಟಾಡೋಮ್ ಕೋಚ್ ಅಳವಡಿಸಿದೆ. ನಿನ್ನೆ ಆರಂಭವಾದ ಮೊದಲ ಟ್ರಿಪ್ನಲ್ಲಿ ಶಿವಮೊಗ್ಗಕ್ಕೆ 7 ಜನ ಪ್ರಯಾಣಿಕರು ಪ್ರಯಾಣಿಸಿದ್ದು, ನಿಸರ್ಗ ಸೌಂದರ್ಯ ಸವಿದರು.
ಪ್ರವಾಸಪ್ರಿಯರು ಮಲೆನಾಡಿನ ಸೌಂದರ್ಯ ಸವಿಯಲಿ ಎಂಬ ಸದುದ್ದೇಶದಿಂದ ಯಶವಂತಪುರ-ಬೆಂಗಳೂರು-ಯಶವಂತಪುರ ಇಂಟರ್‌ಸಿಟಿ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ. ನಿನ್ನೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಆಗಮಿಸಿದ ಈ ರೈಲಿನ ವಿಸ್ಟಾಡೋಮ್ ಬೋಗಿಯಲ್ಲಿ ಏಳು ಮಂದಿ ಪ್ರಯಾಣಿಕರು ಆಗಮಿಸಿದರು. ಹಾಗೆಯೇ, ಶಿವಮೊಗ್ಗದಿಂದ ಎಂಟು ಮಂದಿ ಪ್ರಯಾಣಿಕರು ಬೆಂಗಳೂರಿಗೆ ತೆರಳಿದರು. ಶಿವಮೊಗ್ಗಕ್ಕೆ ರೈಲು ಬರುತ್ತಿದ್ದಂತೆ ವಿಸ್ಟಾಡೋಮ್ ಬೋಗಿ ಹತ್ತಿದ ಜನರು, ಅದರ ವಿಶೇಷತೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ರೈಲ್ವೆ ಬೋಗಿಯ ತುಂಬೆಲ್ಲಾ ಓಡಾಡಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ವಿಶೇಷತೆಗಳು:
* ವಿಸ್ಟಾಡೋಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತ
* 44 ಸೀಟರ್ ಬೋಗಿಯಲ್ಲಿ ಎಲ್ಲವೂ ಆಟೋಮೆಟಿಕ್
* ಬೋಗಿಯೊಳಗೆ ಹೋಗುತ್ತಿದ್ದಂತೆ ಗಾಜಿನ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ.
* ಲಗೇಜ್ ಇಡಲು ಪ್ರತ್ಯೇಕ ಕಂಪಾರ್ಟ್ಮೆಂಟ್ ವ್ಯವಸ್ಥೆ.
* ಎರಡು ಬದಿಯಲ್ಲೂ ಎರಡು ಸೀಟ್ ಸುಖಾಸನ. ಈ ಆಸನಗಳು ರೈಲಿನ ಕಿಟಕಿಯ ಕಡೆಗೆ ತಿರುಗುತ್ತವೆ.
* ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ. ತಿಂಡಿ, ತಿನಿಸುಗಳನ್ನಿಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ.
* ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತು ಆಕಾಶದೆಡೆಗೆ ನೋಡಬಹುದು.
* ವಿಸ್ಟಾಡೋಮ್ ಬೋಗಿಯ ಒಂದು ತುದಿಯಲ್ಲಿ ಸಂಪೂರ್ಣ ದೊಡ್ಡ ಗಾಜು ಅಳವಡಿಸಲಾಗಿದೆ. ಹಾಗಾಗಿ ರೈಲು ಚಲಿಸುತ್ತಿದ್ದಾಗ ಬೋಗಿಯ ಕೊನೆಯಲ್ಲಿ ನಿಂತು ಸುತ್ತಮುತ್ತಲ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಈ ಜಾಗ ಅತ್ಯಂತಪ್ರಿಯವಾಗಲಿದೆ.
* ರೈಲಿನಲ್ಲಿ ಪುಟ್ಟದೊಂದು ಕಿಚನ್ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜರೇಟರ್, ಮೈಕ್ರೋ ವೇವ್ ವೋವನ್ ಇಡಲಾಗಿದೆ.
* ಈ ಬೋಗಿಯ ಟಾಯ್ಲೆಟ್ಗಳ ವಿನ್ಯಾಸವೂ ವಿಭಿನ್ನ. ಸ್ಲೈಡಿಂಗ್ ಬಾಗಿಲುಗಳು, ಆಟೋಮೆಟಿಕ್ ಲೈಟ್ಗಳು ಇಲ್ಲಿವೆ. ಈ ವ್ಯವಸ್ಥೆಗಳು ಪ್ರಯಾಣಿಕರಿಗೆ ಹಿತಾನುಭವ ನೀಡಲಿದೆ.
ಈವರೆಗೂ ಬೆಂಗಳೂರು - ಮಂಗಳೂರು ರೈಲಿನಲ್ಲಿ ಮಾತ್ರ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈಗ ಯಶವಂತಪುರ - ಶಿವಮೊಗ್ಗ - ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಈ ಮೂಲಕ ವಿಸ್ಟಾಡೋಮ್ ಬೋಗಿಯೊಂದಿಗೆ ಸಂಚರಿಸುವ ರಾಜ್ಯದ ಎರಡನೇ ರೈಲು ಇದಾಗಿದೆ.
ಪ್ರಯಾಣದ ಸಮಯ ಹೀಗಿದೆ..
ಈ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 3.30 ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.
ತಾಳಗುಪ್ಪದವರೆಗೆ ವಿಸ್ತರಿಸಲು ಮನವಿ:
2022ರ ಮಾರ್ಚ್ 31ರವರೆಗೆ ಈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಟೂರಿಸ್ಟ್ಗಳಿಗೆ, ಪರಿಸರಪ್ರಿಯರಿಗೆ ವಿಸ್ಟಾಡೋಮ್ ಬೋಗಿಯಲ್ಲಿನ ಪ್ರಯಾಣ ಹಿತವಾದ ಅನುಭವ ನೀಡಲಿದೆ. ಹಾಗಾಗಿ, ಈ ಬೋಗಿ ಇರುವ ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸದೆ ತಾಳಗುಪ್ಪದವರೆಗೆ ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಮಲೆನಾಡಿನ ನೇಸರವನ್ನು ಕಣ್ತುಂಬಿಕೊಳ್ಳಲು ಈ ಮಾರ್ಗ ಉತ್ತಮ.
ವಿಸ್ಟಾಡೋಮ್ ಬೋಗಿಯನ್ನು ತಾಳಗುಪ್ಪದವರೆಗೆ ವಿಸ್ತರಣೆ ಮಾಡಿದರೆ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನಹರಿಸಬೇಕಿದೆ. ಮೊದಲ ದಿನದಿಂದಲೇ ಈ ಬೋಗಿಗೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿರುವುದು ರೈಲ್ವೆ ಇಲಾಖೆಗೆ ಸಮಾಧಾನ ತಂದಿದೆ.