ಶಿವಮೊಗ್ಗ: ತುಮಕೂರು, ರಾಮನಗರ ಸೇರಿದಂತೆ ರಾಜಧಾನಿ ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದ ರೇಷ್ಮೆ ಕೃಷಿ ಮಲೆನಾಡಿನಲ್ಲೂ ನಡೆಯುತ್ತಿದೆ.
ಮಲೆನಾಡಿನಲ್ಲಿ ಉತ್ತಮ ರೇಷ್ಮೆ ಇಳುವರಿ ಆಗುತ್ತಿದೆ. ಆದ್ರೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದೇ ಸಮಸ್ಯೆಯಾಗುತ್ತಿದೆ. ಹೌದು, ಶಿವಮೊಗ್ಗದಲ್ಲಿ ಬೆಳೆದ ರೇಷ್ಮೆಯನ್ನು ಮಾರಾಟ ಮಾಡಲು ದೂರದ ಜಿಲ್ಲೆಗಳಿಗೆ ರೈತರು ಹೋಗಬೇಕಾದ ಪರಿಸ್ಥಿತಿಯಿದೆ.
ರೈತರ ಆದಾಯಕ್ಕೆ ಪೆಟ್ಟು:
ಶಿವಮೊಗ್ಗ ತಾಲೂಕಿನ ಸಂತೆಕಡೂರು ಹಾಗೂ ಕಾಚಿನಕಟ್ಟೆ ಭಾಗದಲ್ಲಿ ಹೆಚ್ಚಿನ ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಜಿಲ್ಲೆಯ 300ಕ್ಕೂ ಹೆಚ್ಚು ರೈತರು 500 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ರೇಷ್ಮೆ ಇಳುವರಿಯಂತೂ ಅತ್ಯುತ್ತಮವಾಗಿ ಬರುತ್ತಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಹಕಾರವೂ ರೈತರಿಗಿದೆ. ಆದರೆ ಮಾರಾಟ ಮಾಡಲು ರೈತರು ರಾಮನಗರ ಇಲ್ಲವೇ ತುಮಕೂರಿಗೆ ಹೋಗಬೇಕಿದೆ. ಈ ಕಾರಣಕ್ಕೆ ರೈತರ ಆದಾಯವೂ ಕಡಿಮೆಯಾಗುತ್ತಿದೆ.
ರೇಷ್ಮೆ ಮಾರುಕಟ್ಟೆ ಆರಂಭಿಸಿ:
ಕಳೆದ 15 ವರ್ಷಗಳ ಹಿಂದೆ ಕೆಲವೇ ಕೆಲವು ಎಕರೆಯಷ್ಟು ಜಮೀನಿನಲ್ಲಿ ಆರಂಭಗೊಂಡ ರೇಷ್ಮೆ ಕೃಷಿ ಇದೀಗ 500ಕ್ಕೂ ಹೆಚ್ಚು ಎಕರೆಗಳಿಗೆ ವ್ಯಾಪಿಸಿದೆ. ಆದರೆ ಮಾರುಕಟ್ಟೆ ಮಾತ್ರ ಶಿವಮೊಗ್ಗದಲ್ಲಿಲ್ಲ. ಶಿವಮೊಗ್ಗದಲ್ಲೇ ಮಾರುಕಟ್ಟೆ ಆರಂಭಿಸಬೇಕು. ಇಲ್ಲವೇ, ಅಕ್ಕಪಕ್ಕದ ಜಿಲ್ಲೆಗಳಲ್ಲಾದರೂ ಮಾರುಕಟ್ಟೆ ಆರಂಭಿಸಿದರೆ ಅನುಕೂಲವಾಗುತ್ತದೆ ಎಂಬುದು ಮಲೆನಾಡಿನ ರೇಷ್ಮೆ ಬೆಳೆಗಾರರ ಒತ್ತಾಯ.
ಇದನ್ನೂ ಓದಿ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಚಿಣ್ಣರಧಾಮ, 300 ಮಕ್ಕಳಿಗೆ ಆಶ್ರಯ