ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಭಾಗದ ಶಿಕ್ಷಕ ಸ್ಟ್ಯಾನಿ ಲೋಪಿಸ್ ತಮ್ಮ ಸಾಧನೆಯ ಮೂಲಕ ಎಲ್ಲರೂ ಕೊಂಡಾಡುವಂತೆ ಮಾಡಿದ್ದಾರೆ. ಇವರು ತಮ್ಮ ಕೈ ಬೆರಳಿನ ಮೂಲಕ 'ವರ್ಲ್ಡ್ ಆಫ್ ಇಂಡಿಯಾ'ಕ್ಕೆ ಸೇರ್ಪಡೆಯಾಗಿದ್ದಾರೆ. ಜೊತೆಗೆ ' ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡ್ಸ್'ನಲ್ಲೂ ತಮ್ಮ ಹೆಸರನ್ನು ದಾಖಲು ಮಾಡಿದ್ದಾರೆ.
ಬೆರಳ ತುದಿ ಮೇಲೆ ಕೋಲು ನಿಲ್ಲಿಸಿ ದಾಖಲೆ:
ಸ್ಟ್ಯಾನಿ ಲೋಪಿಸ್ ಎರಡು ಇಂಚು ಅಗಲ ಮತ್ತು 50 ಇಂಚು ಉದ್ದದ ಕೋಲನ್ನು 10 ನಿಮಿಷಗಳ ಕಾಲ ಬೆರಳ ತುದಿಯಲ್ಲಿ ನಿಲ್ಲಿಸಿಕೊಂಡು ದಾಖಲೆಯನ್ನು ನಿರ್ಮಿಸಿದ್ದಾರೆ. ಇವರು ಒಂದು ಬೆರಳಿನ ಮೇಲೆ ಕೋಲನ್ನು 1 ನಿಮಿಷ ಸಮತೋಲನವಾಗಿಟ್ಟುಕೊಂಡು ನಿಲ್ಲುತ್ತಾರೆ. ಹೀಗೆ ತಮ್ಮ ಕೈನ ಎಲ್ಲ ಬೆರಳುಗಳಲ್ಲೂ ಕೋಲನ್ನು ಒಂದೊಂದು ನಿಮಿಷ ಸಮತೋಲನವಾಗಿಟ್ಟುಕೊಳ್ಳುತ್ತಾರೆ. ಶಿಕ್ಷಕ ಸ್ಟ್ಯಾನಿ ಅವರು ಈ ಕೋಲಿನ ಮ್ಯಾಜಿಕ್ ಅನ್ನು ಒಂದು ಬೆರಳ ತುದಿಯಿಂದ ಪ್ರಾರಂಭಿಸಿದ್ರೆ ಇಲ್ಲೇ ನಿಲ್ಲೋದಿಲ್ಲ. ಈ ಕೋಲನ್ನು ಅದು ಒಂದು ಬೆರಳಿನಿಂದ ಇನ್ನೊಂದು ಬೆರಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾ ಸ್ಟ್ಯಾ್ಲಿನಿ ಸಾಗುತ್ತಾರೆ.
50 ಇಂಚು ಉದ್ದದ ಕೋಲನ್ನು ಒಮ್ಮೆ ಕೈಯಲ್ಲಿ ಹಿಡಿದರೆ ಅದನ್ನು ಬೇರೆ ಕೈಯ ಸಹಾಯವಿಲ್ಲದೆಯೇ, ತಮ್ಮದೇ ಬೆರಳಿನಿಂದ ಒಂದಕ್ಕೊಂದರಂತೆ ವರ್ಗಾಯಿಸುತ್ತಾರೆ. ಈ ಮೂಲಕ ಸ್ಟ್ಯಾನಿ ಲೋಪಿಸ್ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ಮೂಡಿಸಿದ್ದಾರೆ. ಸ್ಟ್ಯಾನಿ ಲೋಪಿಸ್ ರವರಿಗೆ ಬಾಲ್ಯದಿಂದಲೂ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಬಹಳ ಹೆಚ್ಚು. ತಮ್ಮ ಕಾಲೇಜು ಅವಧಿಯಲ್ಲಿ ಏಕಪಾತ್ರಾಭಿನಯಕ್ಕೆ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಇವರು ಕಥೆ, ಕವನ, ನಾಟಕಗಳನ್ನು ರಚಿಸಿ, ತಮ್ಮ ಶಾಲೆಯಲ್ಲಿಯೇ ಪ್ರದರ್ಶನ ನೀಡುತ್ತಾರೆ.
ಚಲನ ಚಿತ್ರ ನಿರ್ಮಾಣ ಮಾಡುವ ಹಂಬಲ:
ಇವರ ಕಥೆಗಳು ಭದ್ರಾವತಿಯ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ' ಮನದ ಕೂಗು' ಎಂಬ ಕವನ ಸಂಕಲನ, 'ದುಡುಕಿದ ಜೀವ' ಕಥಾ ಸಂಕಲನ, ' ಹಾಡು-ಪಾಡು' ಎಂಬ ಸಾಮಾಜಿಕ ಭಾವಗೀತೆ ಧ್ವನಿ ಸುರುಳಿಯಾಗಿ ಬಿಡುಗಡೆಯಾಗಿದೆ. ಕಥೆಯೊಂದನ್ನು ಬರೆದು ' ಮುಪ್ಪು' ಎಂಬ ಕಿರುಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ. 2013-14 ನೇ ಸಾಲಿನ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ವೈಯಕ್ತಿಕ ಯುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮುಂದೆ ಇವರು ಚಲನಚಿತ್ರವನ್ನು ನಿರ್ಮಾಣ ಮಾಡಬೇಕು ಎಂಬ ಹಂಬಲವನ್ನು ಹೊಂದಿದ್ದಾರೆ. ಸ್ಟ್ಯಾನಿ ಲೋಪಿಸ್ ಅವರ ಸಾಧನೆ ಹೀಗೆ ಮುಂದುವರೆಯಲಿ ಎಂದು ಹಾರೈಸೋಣ.