ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರ ಆರೋಗ್ಯ ಕಾಪಾಡಲು ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಕರೆ ನೀಡಿದ್ದಾರೆ.
ನಗರದ ಬೊಮ್ಮನಕಟ್ಟೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಸೇವಾ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಯಾಗಿರುವುದು ಸಂತಸ ತಂದಿದೆ. ಫಲಾನುಭವಿಗಳು ಕಾಯಿಲೆ ಬರುವವರೆಗೂ ಕಾಯದೆ ಮೊದಲೇ ಈ ಕಾರ್ಡ್ ನ್ನು ಮಾಡಿಸಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹಲವು ಕಾಯಿಲೆಗಳಿಗೆ ಆಯುಷ್ಮಾನ್ ಕಾರ್ಡ್ ರಾಮಬಾಣವಾಗಿದ್ದು, ತಕ್ಷಣಕ್ಕೆ ಉಚಿತವಾಗಿ ಚಿಕಿತ್ಸೆ ಪಡೆಯಲು ಈ ಕಾರ್ಡ್ ಅನುಕೂಲವಾಗಿದೆ. ಈ ಯೋಜನೆಯಿಂದ ಬಡವರಿಗೆ ಅನುಕೂಲ ಒದಗಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಶ್ವರಪ್ಪ ಧನ್ಯವಾದ ತಿಳಿಸಿದರು.
ಆಯುಷ್ಮಾನ್ ಕಾರ್ಡ್ ನ್ನು ಸೇವಾ ದಿವಸ್ ಅಂಗವಾಗಿ ಬಡವರಿಗೆ ಉಚಿತವಾಗಿ ಮಾಡಿಕೊಡುವ ಕಾರ್ಯ ನಡೆಯುತ್ತಿದೆ. ಇದು ಕೇವಲ ಬಿಜೆಪಿಯವರಿಗೆ ಮಾತ್ರವಲ್ಲದೆ, ಕಾಂಗ್ರೆಸ್ ಜೆಡಿಎಸ್ ಎಲ್ಲರೂ ಸಹ ಇದರ ಉಪಯೋಗ ಪಡೆಯಬೇಕು ಎಂದರು.
ಈ ವೇಳೆ ಸಂಸದ ಬಿ. ವೈ. ರಾಘವೇಂದ್ರ, ಎಂಎಲ್ಸಿ ರುದ್ರೇಗೌಡ, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಹಾಜರಿದ್ದರು.