ಶಿವಮೊಗ್ಗ: ರಾಜಕೀಯ ಚದುರಂಗದಾಟದಲ್ಲಿ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಜೊತೆ ಜೊತೆಗೆ ಬೆಳೆದು ಬಂದವರು. ಪಕ್ಷ ಸಂಘಟನೆಯನ್ನೂ ಸಹ ಇಬ್ಬರೂ ಸೇರಿಯೇ ಮಾಡಿದ್ದಾರೆ. ಯಡಿಯೂರಪ್ಪ ಅವರು ಮಾಸ್ ಲೀಡರ್ ಆಗಿ ಬೆಳೆದರೆ, ಈಶ್ವರಪ್ಪ ಅವರು ಪ್ರಭಾವಿ ನಾಯಕರಾಗಿಯೇ ಬೆಳೆದಿದ್ದಾರೆ. ಜೊತೆಗೆ ಈ ಹಿಂದಿನ ರಾಜಕೀಯ ಇತಿಹಾಸ ನೋಡಿದಾಗ ಯಡಿಯೂರಪ್ಪ ತ್ಯಜಿಸಿದ ಬಹುತೇಕ ಎಲ್ಲ ಸ್ಥಾನಗಳನ್ನು ಅವರ ಬಳಿಕ ಈಶ್ವರಪ್ಪ ಅಲಂಕರಿಸಿದ್ದಾರೆ. ಹೀಗಾಗಿ ಇದೀಗ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಈಶ್ವರಪ್ಪ ಅವರನ್ನು ನೇಮಿಸಬೇಕು ಎಂಬ ಕೂಗು ಜಿಲ್ಲೆಯಲ್ಲಿ ಕೇಳಿಬರ್ತಿದೆ.
ಕೆ.ಎಸ್. ಈಶ್ವರಪ್ಪ ಅವರು ಕಳೆದ 3 ದಶಕಗಳಿಂದ ಕೇಸರಿ ಪಕ್ಷ ಕಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿದ್ದಾರೆ. ಜೊತೆಗೆ ಪ್ರಮುಖ ಸಚಿವ ಸ್ಥಾನಗಳನ್ನು ನಿರ್ವಹಿಸಿದ ಅನುಭವವಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈಶ್ವರಪ್ಪ ಅವರೂ ಕಾರಣ. ಇದುವರೆಗೆ ಈಶ್ವರಪ್ಪರಿಂದ ಪಕ್ಷಕ್ಕೆ ಅನ್ಯಾಯವಾಗಿಲ್ಲ. ಹಿಂದುಳಿದ ವರ್ಗದ ನಾಯಕರಾಗಿ ಬೆಳೆದಿರುವ ಕೆಎಸ್‌ಈ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಅವರ ಅಭಿಮಾನಿಗಳು.
ಇದನ್ನೂ ಓದಿ: ಈ ಅವಧಿಯಲ್ಲಿ ಏನ್ಬೇಕಾದ್ರೂ ಆಗ್ಬಹುದು, ಯಾರೂ ಗೂಟಾ ಹೊಡೆದುಕೊಂಡು ಇರಲ್ಲ : ಸಚಿವ ಈಶ್ವರಪ್ಪ
ಯಡಿಯೂರಪ್ಪ ಅವರು ಯಾವುದೇ ಜವಾಬ್ದಾರಿಯಿಂದ ಕೆಳಗಿಳಿದು ಇನ್ನೊಂದು ಜವಾಬ್ದಾರಿಯನ್ನು ಅಲಂಕರಿಸಿದಾಗ ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನವನ್ನು ಈಶ್ವರಪ್ಪನವರೇ ಅಲಂಕರಿಸಿದ್ದಾರೆ. ಹೀಗಾಗಿ ಇದೀಗ ಮುಖ್ಯಮಂತ್ರಿ ಸ್ಥಾನವನ್ನು ಈಶ್ವರಪ್ಪ ಅವರಿಗೆ ನೀಡಬೇಕು ಎಂಬುದು ಶಿವಮೊಗ್ಗ ಜಿಲ್ಲೆಯಲ್ಲಿನ ಈಶ್ವರಪ್ಪ ಅಭಿಮಾನಿಗಳ ಒತ್ತಾಯವಾಗಿದೆ.