ಶಿವಮೊಗ್ಗ : ಮುಂಗಾರು ಆರಂಭವಾದ್ರೆ ಸಾಕು ಮಲೆನಾಡಿನ ಜಲಾಶಯಗಳು ತುಂಬಿ ಹರಿಯುತ್ತವೆ. ಡ್ಯಾಂಗಳಲ್ಲಿ ನೀರಿನ ಮಟ್ಟ ಜಾಸ್ತಿಯಾದಾಗ ನೀರನ್ನು ಹೊರ ಬಿಟ್ಹಾಗ ಹಾಲುಕ್ಕುವಂತೆ ಕಾಣುವ ದೃಶ್ಯ ನೋಡುವುದೇ ಚೆಂದ. ಅಣೆಕಟ್ಟೆಗಳ ತವರೂರು ಶಿವಮೊಗ್ಗ ಜಿಲ್ಲೆ ಸಾವೆಹಕ್ಲು ಜಲಾಶಯ ಮಳೆಗಾಲದಲ್ಲಿ ಕಣ್ಮನ ಸೆಳೆಯುತ್ತಿದೆ. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಇದನ್ನ ನಿರ್ಮಿಸಲಾಗಿದೆ..
ಹೊಸನಗರ ತಾಲೂಕಿನ ಸಾವೆಹಕ್ಲು ಎಂಬ ಸುಂದರ ಪರಿಸರದಲ್ಲಿ ನಿರ್ಮಾಣ ಮಾಡಿರುವ ಈ ಅಣೆಕಟ್ಟು 570 ಮೀಟರ್ ಎತ್ತರವಿದೆ. 1985ರಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಈ ಅಣೆಕಟ್ಟೆಯಿಂದ ಲಿಂಗನಮಕ್ಕಿ ಅಣೆಕಟ್ಟೆಗೆ ನೀರು ಪೂರೈಕೆ ಮಾಡಲಾಗುತ್ತದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ವಿದ್ಯುತ್ ಉತ್ಪಾದನೆಗೆ ನೀರು ಕಡಿಮೆ ಆದಾಗ ಇಲ್ಲಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಅಣೆಕಟ್ಟೆಯಿಂದ ಕಾಲುವೆ ವ್ಯವಸ್ಥೆಯ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಸಾವೆಹಕ್ಲು ಅಣೆಕಟ್ಟು ತುಂಬಿ ಹರಿಯಲು ಗೇಟ್ ವ್ಯವಸ್ಥೆ ಇಲ್ಲ. ಬದಲಿಗೆ ಇಲ್ಲಿ ದೊಡ್ಡ ಗುಂಡಿಯನ್ನು ಚೌಕಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ನೀರು ಬೀಳುವುದನ್ನು ನೋಡುವುದೇ ಚೆಂದ. ನೀರು ಹರಿದು ಸೀದಾ ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಹೋಗುತ್ತದೆ. ಇದು ಮಲೆನಾಡಿನಲ್ಲಿ ಜೋರಾಗಿ ಮಳೆ ಬಂದಾಗ ಮಾತ್ರ ನೋಡಲು ಸಾಧ್ಯ.
ಈ ಅಣೆಕಟ್ಟನ್ನು ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣಕ್ಕೂ ಮೊದಲೇ ನಿರ್ಮಿಸಲಾಗಿತ್ತು. ಲಿಂಗನಮಕ್ಕಿ ಅಣೆಕಟ್ಟೆಗೆ ನೀರು ಒದಗಿಸುವ ಅಣೆಕಟ್ಟು ಇದಾಗಿದೆ. ಇದನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಇದು ಕೆಪಿಸಿಯವರ ವ್ಯಾಪ್ತಿಯಲ್ಲಿ ಇರುವುದರಿಂದ ಇಲ್ಲಿ ಪ್ರವಾಸಿಗರಿಗೆ ಪ್ರವೇಶ ಸಿಗುವುದಿಲ್ಲ.
ಇಲ್ಲಿ ಕಾಡು ಪ್ರಾಣಿಗಳು ಸಹ ಹೆಚ್ಚಾಗಿವೆ ಎನ್ನಲಾಗುತ್ತದೆ. ಮಳೆಗಾಲದಲ್ಲಿ ಈ ಅಣೆಕಟ್ಟೆಯನ್ನು ನೋಡಲು ಆಗುವುದಿಲ್ಲ, ಕಾರಣ ಸಂಪೂರ್ಣ ಮಂಜಿನಿಂದ ಆವೃತವಾಗಿರುತ್ತದೆ. ಗಾಳಿ ಬೀಸಿದಾಗ ಮಾತ್ರ ನೋಡುವ ಅವಕಾಶ ಸಿಗುತ್ತದೆ. ಇದಕ್ಕೆ ಕೆಪಿಸಿಯವರ ಅನುಮತಿ ಬೇಕೇಬೇಕು.