ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ಹಾಲು ಶಿಥಲೀಕರಣ ಕೇಂದ್ರಕ್ಕೆ ಇಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟಕದಲ್ಲಿ ಹಾಲಿನ ಗುಣಮಟ್ಟಗಳನ್ನು ಪರಿಶೀಲಿಸಿದ ಸಚಿವರು, ಕೊಬ್ಬು, ಎಸ್.ಎನ್.ಎಫ್ ಹಾಗೂ ಇತರೆ ಹಾಲಿನ ಗುಣಮಟ್ಟ ನಿಯಂತ್ರಿಸುವ ಅಂಶಗಳ ದಾಖಲೆಗಳನ್ನು ಪರೀಕ್ಷಿಸಿದರು. ಹಾಲಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಘಟಕದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ನಂತರ ಸಚಿವರು ಸಂಡಾ ಕೈಗಾರಿಕಾ ಕ್ಷೇತ್ರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿಯ ಪಶು ಆಹಾರ ಕೇಂದ್ರಕ್ಕೆ ಭೇಟಿ ನೀಡಿ, ಪಶುಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಪಶು ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುವಂತೆ ತಿಳಿಸಿದರು.
ಅಲ್ಲದೆ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಯಾವುದೇ ರೀತಿಯ ಗುಣಮಟ್ಟ ಕುರಿತಾದ ಅಚಾತುರ್ಯಗಳು ನಡೆಯದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ರೈತಾಪಿ ವರ್ಗದವರಿಗೆ ಉತ್ತಮ ಗುಣಮಟ್ಟದ ಪಶು ಆಹಾರ ನೀಡುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಘಟಕದ ವ್ಯವಸ್ಥಾಪಕರಿಗೆ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.