ಶಿವಮೊಗ್ಗ : ಕುಟು ಕುಟು ಅಂತಾ ಸಾಯುತ್ತಿರುವ ಕಾಂಗ್ರೆಸ್ಗೆ ಬದುಕಲಿ ಎಂದು ಹಾನಗಲ್ ಜನ ದಯೆ ತೋರಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.
ಉಪ ಚುನಾವಣೆಯ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಜಾತೀಯತೆ ರಾಜಕಾರಣ, ಅಶ್ಲೀಲ ಪದ ಬಳಕೆ, ಮುಸ್ಲಿಮರನ್ನು ಎತ್ತಿ ಕಟ್ಟುವ ಮೂಲಕ ಚುನಾವಣೆ ಮಾಡಿದ್ದಾರೆ.
ಆದರೆ, ನಾವು ಮೋದಿಯವರ ನೇತೃತ್ವದ ಆಡಳಿತ ಹಾಗೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗಿದ್ದೆವು ಎಂದರು.
2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ : ಅದರಂತೆ ಸಿಂದಗಿಯಲ್ಲಿ ನಿರೀಕ್ಷೆಗೆ ಮೀರಿ ಗೆದ್ದಿದ್ದೇವೆ ಹಾಗೂ ಹಾನಗಲ್ನಲ್ಲಿ ಏಳು ಸಾವಿರ ಮತಗಳ ಅಂತರದಲ್ಲಿ ಸೋಲುತ್ತೇವೆ ಎಂದು ನಾವು ನೀರಿಕ್ಷೆ ಮಾಡಿರಲಿಲ್ಲ.
ಹಾಗಾಗಿ, ಬರುವಂತಹ ದಿನಗಳಲ್ಲಿ ಯಾಕೆ ಸೋತಿದ್ದೇವೆ ಎಂಬುದಕ್ಕೆ ಪರಿಹಾರ ಹುಡುಕಿ ಹಾನಗಲ್ ಸೇರಿ ರಾಜ್ಯದ ಎಲ್ಲಾ ಕಡೆ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಸಾಮೂಹಿಕ ಓಡಾಟ ಮಾಡಿ ಸ್ಪಷ್ಟ ಬಹುಮತ ಪಡೆದು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.
ಸುನಾಮಿಯಲ್ಲಿ ಈಗಾಗಲೇ ಕಾಂಗ್ರೆಸ್‌ನವರು ಕೊಚ್ಚಿ ಹೋಗಿದ್ದಾರೆ : ಮುಂದಿನ ದಿನಗಳಲ್ಲಿ ಸುನಾಮಿ ಬರುತ್ತೆ ಎನ್ನುವ ಸಿದ್ದರಾಮಯ್ಯನವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುನಾಮಿಯಲ್ಲಿ ಈಗಾಗಲೇ ಕಾಂಗ್ರೆಸ್‌ನವರು ಕೊಚ್ಚಿ ಹೋಗಿದ್ದಾರೆ. ಸ್ವತಃ ಸಿದ್ದರಾಮಯ್ಯನವರೇ ತಮ್ಮ ಸ್ವಕೇತ್ರದಲ್ಲಿ ಸೋತಿದ್ದರು. ಏನೋ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಂಗ್ರೆಸ್ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದೆ ಎಂದು ಲೇವಡಿ ಮಾಡಿದರು.
ಪ್ರಾದೇಶಿಕ ಪಕ್ಷಗಳಿಗೆ ಈ ದೇಶದಲ್ಲಿ ಯಾವತ್ತೂ ಸ್ಥಾನ ಇಲ್ಲ: ಜೆಡಿಎಸ್ ಠೇವಣಿ ಕಳೆದುಕೊಂಡಿರುವ ಕುರಿತು ಮಾತನಾಡಿದ ಅವರು, ಪ್ರಾದೇಶಿಕ ಪಕ್ಷಗಳಿಗೆ ಈ ದೇಶದಲ್ಲಿ ಯಾವತ್ತೂ ಸ್ಥಾನ ಇಲ್ಲ ಎಂಬುದು ಯಾವೊತ್ತೋ ಗೊತ್ತಾಗಿದೆ. ಈಗ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದರು.
ಸಿದ್ದರಾಮಯ್ಯನವರೇ ತಮ್ಮ ಕ್ಷೇತ್ರದಲ್ಲಿ ಸೋತರಲ್ಲಾ?: ಸಿಎಂ ಜಿಲ್ಲೆಯಲ್ಲಿಯೇ ಸೋತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೊಮ್ಮಾಯಿ ಅವರ ಕ್ಷೇತ್ರದಲ್ಲಿ ಸೋತಿದ್ದೇವೆ, ಒಪ್ಪಿಕೊಳ್ಳುತ್ತೇವೆ. ಆದರೆ, ಸ್ವತಃ ಸಿದ್ದರಾಮಯ್ಯನವರೇ ತಮ್ಮ ಕ್ಷೇತ್ರದಲ್ಲಿ ಸೋತರಲ್ಲ. ಹಾಗಾಗಿ, ಒಂದೇ ಒಂದು ಸೋಲು ಎಲ್ಲವನ್ನೂ ತೀರ್ಮಾನ ಮಾಡುತ್ತೆ ಎನ್ನುವುದಲ್ಲ ಎಂದರು.