ಶಿವಮೊಗ್ಗ : ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಘಟನೆ ಭದ್ರಾವತಿಯ ತಮ್ಮಡಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಕಂಬದಾಳು- ಹೂಸೂರು ಗ್ರಾಮ ಪಂಚಾಯತ್, ಹುಣಸೆಕಟ್ಟೆ ಜಂಕ್ಷನ್, ರಂಗನಾಥಪುರ ಗ್ರಾಮಗಳಲ್ಲಿನ 150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತ ಸಮಾಧಿ ಮಾಡಲಾಗಿದೆ.
ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಚಿಕಿತ್ಸೆ ನಡೆಸಿ, ಪುನಃ ಅವುಗಳನ್ನು ಬಿಡಬೇಕು. ಆದರೆ, ನಾಯಿಗಳನ್ನು ಹಿಡಿದವರು ಅವುಗಳನ್ನು ಎಂಪಿಎಂ ವಿಭಾಗದ ತಮ್ಮಡಿಹಳ್ಳಿ ಅರಣ್ಯದಲ್ಲಿ ಜೀವಂತವಾಗಿ ಹೂತು ಹಾಕಿದ್ದಾರೆ. ಅರಣ್ಯ ಪ್ರದೇಶದ ಗ್ರಾಮದ ಜನ ನಾಯಿಗಳ ಬೊಗಳುವಿಕೆಯ ಶಬ್ಧ ಕೇಳಿ ಸ್ಥಳಕ್ಕೆ ಬಂದು ನೋಡಿದಾಗ ನಾಯಿಗಳನ್ನು ಹೂತು ಹಾಕಿರುವುದು ತಿಳಿದು ಬಂದಿದೆ.
ಅನಧಿಕೃತವಾಗಿ ನಾಯಿ ಹಿಡಿಯಲು ಗ್ರಾಪಂ ಅನುಮತಿ!
ಬೀದಿ ನಾಯಿಗಳನ್ನು ಹಿಡಿಸಬೇಕಾದ್ರೆ ಗ್ರಾಮ ಪಂಚಾಯತ್ ನಲ್ಲಿ ತೀರ್ಮಾನವಾಗಿ ನಾಯಿಗಳನ್ನು ಹಿಡಿಯಲು ಅನುಮತಿ ನೀಡಬೇಕು. ಇದಕ್ಕೆ ಸೂಕ್ತ ಹಣ ನೀಡಬೇಕು. ಆದರೆ, ಇದ್ಯಾವುದನ್ನು ಮಾಡದೆ, ಪಂಚಾಯತ್ ನವರ ಮೌಖಿಕ ಆದೇಶದ ಮೇರೆಗೆ ಮೈಸೂರು ಭಾಗದ ನಾಯಿ ಹಿಡಿಯುವವರಿಗೆ ಅನುಮತಿ ನೀಡಿದ್ದಾರೆ. ನಾಯಿ ಹಿಡಿದವರು ಮೊದಲೆಲ್ಲಾ ಬೇರೆ ಕಡೆ ನಾಯಿಗಳನ್ನು ಬಿಟ್ಟು ಬರುತ್ತಿದ್ದರು. ಆದರೆ, ಈ ಬಾರಿ ಬೀದಿ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ.
ಪ್ರಾಣಿದಯಾ ಸಂಘದಿಂದ ದೂರು
ಗ್ರಾಮಸ್ಥರ ಮಾಹಿತಿ ಮೇರೆಗೆ ಶಿವಮೊಗ್ಗ ಜಿಲ್ಲಾ ಪ್ರಾಣಿ ದಯಾಸಂಘದವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ನಂತರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಸ್ಥಳ ಪರಿಶೀಲನೆಗೆ ಆಗಮಿಸಿದ್ದಾರೆ.