ಶಿವಮೊಗ್ಗ: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುವೆಂಪು ವಿಶ್ವವಿದ್ಯಾಲಯದ (Kuvempu University) ಸುಮಾರು 73ಕ್ಕೂ ಹೆಚ್ಚು ಬೋಧಕೇತರ ನೌಕರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ, ವೇತನ ನಿಗದೀಕರಣ ಸೌಲಭ್ಯದ ಆದೇಶ ಪತ್ರವನ್ನು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅರ್ಹ ಫಲಾನುಭವಿಗಳಿಗೆ ನೀಡಿದರು.
ಸಹಾಯಕ ಕುಲ ಸಚಿವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ವೇತನ ನಿಗದೀಕರಣದ ಆದೇಶ ಪ್ರತಿ ಸ್ವೀಕರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ನಂತರ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕಳೆದ ಆಗಸ್ಟ್ ತಿಂಗಳಲ್ಲಿ ಸಾಂಕೇತಿಕವಾಗಿ ಎಂಟು ನೌಕರರಿಗೆ ವೇತನ ನಿಗದೀಕರಣದ ಆದೇಶ ಪ್ರತಿ ನೀಡುವುದರೊಂದಿಗೆ ಆರಂಭವಾದ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇನ್ನುಳಿದಂತೆ ಪ್ರಭಾರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 20 ಮಂದಿ ಸಿಬ್ಬಂದಿಗೆ ಹಾಗೂ ವಿವಿಧ ಹಂತಗಳಲ್ಲಿ ಖಾಲಿ ಉಳಿದಿರುವ ರಿಕ್ತ ಸ್ಥಾನಗಳಿಗೆ ತಿಂಗಳಾಂತ್ಯದೊಳಗೆ ಮುಂಬಡ್ತಿ ನೀಡಿ, ವೇತನ ನಿಗದೀಕರಣದ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ರಾಮಲಿಂಗಪ್ಪ, ರಮೇಶ್ ಬಾಬು, ಮತ್ತು ಪ್ರೊ. ಕಿರಣ್ ದೇಸಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.