ಶಿವಮೊಗ್ಗ: ತಾಲೂಕು ಗೆಜ್ಜೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆ ಸರಿಪಡಿಸುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆರ್.ಜಿ. ಉದಯಕುಮಾರ್ ಎಂಬಾತ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.
2021ರ ಸೆಪ್ಟೆಂಬರ್‌ನಲ್ಲಿ ಶಾಲಾ ಅವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾಡಳಿತದ ಮೂಲಕ ಪ್ರಧಾನಿ, ಸಿಎಂ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಶಿಕ್ಷಣ ಇಲಾಖೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ. ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ಅನುಸರಿಸುತ್ತಿದೆ ಎಂದು ಬಾಲಕ ಆರೋಪಿಸಿದ್ದಾನೆ.
ಸಮಸ್ಯೆಗಳೇನು?: ಶಾಲೆಯಲ್ಲಿ 1 ರಿಂದ 7ನೇ ತರಗತಿಯಿದೆ. ಆದರೆ ಕೇವಲ ಮೂರು ಕೊಠಡಿಗಳಿವೆ. ಆಟದ ಮೈದಾನವೇ ಇಲ್ಲವಾಗಿದೆ. ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಸ್ಮಾರ್ಟ್ ಕ್ಲಾಸ್‌ನ ಯಾವುದೇ ವ್ಯವಸ್ಥೆಯಿಲ್ಲ. ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡ, ಕೂಲಿಕಾರ್ಮಿಕ, ಪರಿಶಿಷ್ಟ ಜಾತಿ-ಪಂಗಡ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ ಇತರೆ ಶಾಲೆಗಳಲ್ಲಿ ಲಭ್ಯವಾಗುತ್ತಿರುವ ಶಿಕ್ಷಣ ಸೌಲಭ್ಯಗಳು ದೊರಯುತ್ತಿಲ್ಲ ಎಂದು ವಿದ್ಯಾರ್ಥಿ ಉದಯಕುಮಾರ್ ಹೇಳಿದ್ದಾನೆ.
ಗೆಜ್ಜೇನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರೌಢಶಾಲೆಯಿಲ್ಲ. 8ನೇ ತರಗತಿಗೆ ಶಿವಮೊಗ್ಗ ನಗರಕ್ಕೆ ಹೋಗುವಂತಹ ಸ್ಥಿತಿಯಿದೆ. ಇದರಿಂದ ಅರ್ಧಕ್ಕೆ ಕೆಲ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. 8ನೇ ತರಗತಿ ಜೊತೆಗೆ ಹೈಸ್ಕೂಲ್ ಆರಂಭಿಸುವಂತೆ ಮನವಿ ಮಾಡಿದರೂ, ಶಿಕ್ಷಣ ಇಲಾಖೆ ಕ್ರಮಕೈಗೊಂಡಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂದು ಬಾಲಕ ಆಪಾದಿಸಿದ್ದಾನೆ.
ತಕ್ಷಣವೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ್ ಅವರು ಶಾಲೆಯ ಅಭಿವೃದ್ಧಿಗೆ ಗಮನಹರಿಸಬೇಕು ಎಂದು ಬಾಲಕ ಒತ್ತಾಯಿಸಿದ್ದಾನೆ.
ಇದನ್ನೂ ಓದಿ: ಅಡಕೆ ಮೇಲೆ ಅಧ್ಯಯನ - ಸಮಿತಿ ರಚಿಸಲು ಕೇಂದ್ರ ಸರ್ಕಾರದ ಒಪ್ಪಿಗೆ: ಗೃಹ ಸಚಿವ ಆರಗ