ಮೈಸೂರು : ಅಣ್ಣ-ತಮ್ಮಂದಿರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಎಲೆ ಹುಂಡಿ ಗ್ರಾಮದಲ್ಲಿ ನಡೆದಿದೆ. ಅಣ್ಣನ ಬುದ್ಧಿ ಮಾತಿಗೆ ಮನನೊಂದು ತಮ್ಮ ಆತ್ಮಹತ್ಯೆ ಮಾಡಿಕೊಂಡರೆ, ತಮ್ಮನ ಆತ್ಮಹತ್ಯೆಯ ವಿಷಯ ತಿಳಿದು ಅಣ್ಣನೂ ಸಹ ಸಾವಿಗೆ ಶರಣಾಗಿದ್ದಾರೆ.
ಅಣ್ಣ ವೆಂಕಟೇಶ್ (26), ತಮ್ಮ ಹರೀಶ್ ( 24 ) ಎಂಬುವರು ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಅಣ್ಣ-ತಮ್ಮಂದಿರು. ಇವರು ಹೆಚ್.ಡಿ.ಕೋಟೆ ತಾಲೂಕಿನ ಎಲೆ ಹುಂಡಿ ನಿವಾಸಿಗಳಾಗಿದ್ದು, ಹರೀಶ್ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ ವೇಗವಾಗಿ ಚಾಲನೆ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಅಣ್ಣ ವೆಂಕಟೇಶ್ಗೆ ಕರೆ ಮಾಡಿ ತಿಳಿಸಿದ್ದಾರೆ.
ಇದರಿಂದಾಗಿ ವೆಂಕಟೇಶ್ ತನ್ನ ತಮ್ಮ ಹರೀಶ್ಗೆ ಕರೆ ಮಾಡಿ ಬುದ್ಧಿ ಹೇಳಿದ್ದಾನೆ. ಇದರಿಂದಾಗಿ ಮನನೊಂದ ಸೋದರ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಮ್ಮನ ಸಾವಿನ ವಿಚಾರ ತಿಳಿದ ಅಣ್ಣ, ಮೈಸೂರಿನಿಂದ ಕಾರಿನಲ್ಲಿ ಹೊರಟು ತುಂಬುಸೋಗೆ ಬಳಿಯ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮಸ್ಥರು ಇಬ್ಬರ ಶವಗಳನ್ನು ಗ್ರಾಮಕ್ಕೆ ತಂದು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.