ಮೈಸೂರು: ನನ್ನ ಪ್ರಕಾರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ತಿಂಗಳ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ. ಈ ಬಗ್ಗೆ ಹೈಕಮಾಂಡ್ ಸಹ ಚಿಂತನೆ ನಡೆಸುತ್ತಿದೆ. ನನಗೆ ಬಿಜೆಪಿಯ ಹೈಕಮಾಂಡ್ನ ನಂಟು ಇದೆ ಎಂದು ಈ ಮಾತನ್ನು ಹೇಳುತ್ತಿಲ್ಲ. ಮೂಲಗಳ ಪ್ರಕಾರ ಯಡಿಯೂರಪ್ಪ ಬದಲಾಗುತ್ತಾರೆ. ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ಟೀಕಿಸಿದರು.
ಲವ್ ಜಿಹಾದ್ ಅಸಂವಿಧಾನಿಕ ನಡೆಯಾಗಿದ್ದು, ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. 18 ವರ್ಷ ತುಂಬಿದ ಯುವತಿ 21 ವರ್ಷದ ಯುವಕ ತಾವು ಮದುವೆ ಆಗುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವತಂತ್ರ ಇದೆ. ವಸ್ತು ಸ್ಥಿತಿ ಹೀಗಿರುವಾಗ ಲವ್ ಜಿಹಾದ್ ನಿಷೇಧ ಎಲ್ಲಿಂದ ಬರುತ್ತದೆ ಎಂದರು.
'ಸಿದ್ದರಾಮಯ್ಯ ಮನಸ್ಥಿತಿ ಐಸಿಸ್ ಮನಸ್ಥಿತಿಯೂ ಒಂದೇ' ಎಂಬ ರಾಜ್ಯ ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸಂವಿಧಾನದಲ್ಲಿ ನಂಬಿಕೆ ಇಟ್ಟವನು. ಬಿಜೆಪಿ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಕೆಲಸ ಪ್ರಚೋದನೆ ಮಾಡುವುದು, ಹುಳಿ ಹಿಂಡುವುದು, ಬೆಂಕಿ ಹಚ್ಚುವುದು ಎಂದು ಪ್ರತ್ಯುತ್ತರ ನೀಡಿದರು.
ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಕಾಂಗ್ರೆಸ್ ಪಕ್ಷ ಪರವಾಗಿ ಕೆಲಸ ಮಾಡುವಂತೆ ಹಣ ನೀಡಿದ್ದೆ ಎಂದು ನಾನು ಹೇಳಿಲ್ಲ. ಮಾಧ್ಯಮಗಳಿಂದ ತಪ್ಪು ಮಾಹಿತಿ ಹಬ್ಬಿದೆ. ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸುವ ಬಗ್ಗೆ ಕಾಂಗ್ರೆಸ್ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.