ಮೈಸೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಮೊದಲು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಲಿ ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಫುಟ್ ಪಾತ್ ಗಿರಾಕಿ, ಗುಜುರಿ ವ್ಯಾಪಾರಿ ಮಾಡಿಕೊಂಡು ಇದ್ದವನು, ಎಲ್ಲೋ ಬಸ್ ಓಡಿಸಿಕೊಂಡು ಇದ್ದವನು. ಆತನನ್ನ ದೇವೇಗೌಡ ಕುಟುಂಬದವರು ಶಾಸಕನನ್ನಾಗಿ ಮಾಡಿದ್ರು. ಆದ್ರೆ, ಅವರ ಕುಟುಂಬಕ್ಕೇ ಚಾಕು ಹಾಕಿ ಕಾಂಗ್ರೆಸ್ಗೆ ಬಂದ ಅಂತಹವನನ್ನು ಮೊದಲು ಪಕ್ಷದಿಂದ ಉಚ್ಛಾಟನೆ ಮಾಡಲಿ. ಐಎಂಎ ಹಗರಣದಿಂದ ಸಿಕ್ಕಿಬಿದ್ದವರು ಯಾರು ಎಂದು ಪ್ರಶ್ನಿಸಿದರು. ದಿನೇಶ್ ಗುಂಡೂರಾವ್ ಪೌರತ್ವ ಜಾರಿಗೆ ತಿದ್ದುಪಡಿ ಕಾಯ್ದೆ ಜಾರಿಗೆ ತಂದರೆ ರಾಜ್ಯ ಬೆಂಕಿ ಹತ್ತಿ ಉರಿಯುತ್ತದೆ ಅಂತಾರೆ. ಅವರೊಬ್ಬ ಮತಾಂಧ. ಆತನನ್ನು ಪಕ್ಷದಿಂದ ಕಾಂಗ್ರೆಸ್ ಉಚ್ಛಾಟನೆ ಮಾಡಲಿ. ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಸವಾಲು ಹಾಕ್ತಿನಿ ತಾಕತ್ತಿದ್ದರೆ ಪೌರತ್ವ ವಿಚಾರದಲ್ಲಿ ಚರ್ಚೆಗೆ ಬನ್ನಿ. ನನ್ನನ್ನು ಉಚ್ಛಾಟನೆ ಮಾಡಿ ಅಂತ ಹೇಳಲು ಅವರ್ಯಾರು ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಜನರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ. ಕೊಲೆ ಬೆದರಿಕೆ ಬಂದಿದ್ದರೆ, ಸರ್ಕಾರಕ್ಕೆ ಪತ್ರ ಬರೆಯಿರಿ ಜನರ ಭಾವನೆಗಳನ್ನು ಕೆಣಕಬೇಡ ಎಂದರು. ಬಿಎಸ್ ವೈ ಸರ್ವಜನಾಂಗದ ನಾಯಕ, ವೀರಶೈವ ನಾಯಕ ಮಾತ್ರವಲ್ಲ, ಸರ್ವ ಜನಾಂಗದ ನಾಯಕರು. ಅವರನ್ನು ಎಲ್ಲ ಮಠಾಧಿಪತಿಗಳು ಒಪ್ಪಿಕೊಂಡಿದ್ದಾರೆ ಎಂದರು. ಹೆಚ್ ವಿಶ್ವನಾಥ್ ರಾಜೀನಾಮೆ ಕೊಟ್ಟು ಸೋಲು ಕಂಡಿರುವುದು ನೋವಾಗಿದೆ. ಸೋತವರಿಗೆ ಹಾಗೂ ಗೆದ್ದವರಿಗೆ ಯಾವ ಸ್ಥಾನಕೊಡಬೇಕೆಂದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಮಾಧುಸ್ವಾಮಿ ಯಾವ ಅರ್ಥದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೊ ಗೊತ್ತಿಲ್ಲವೆಂದು ರೇಣುಕಾಚಾರ್ಯ ಹೇಳಿದ್ರು.
ಇನ್ನು ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ದಿವಂಗತ ಅನಂತಕುಮಾರ್ ಸೇವೆಯನ್ನು ಪ್ರಧಾನಿ ಗುರುತಿಸುತ್ತಾರೆ ಎಂದರು.