ಮೈಸೂರು: ಚಾಮುಂಡಿ ಬೆಟ್ಟದ ರಸ್ತೆ ಕುಸಿತದ ಬಗ್ಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ. ಮೂರ್ನಾಲ್ಕು ದಿನದಲ್ಲಿ ಅವರು ಮೈಸೂರಿಗೆ ಬರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಿಎಂ, ಸಿ.ಸಿ.ಪಾಟೀಲ್ ಅವರ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಅವರ ಬಿಡುವು ಮಾಡಿಕೊಂಡಾಗ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ಆದೇಶದಂತೆ ದೇಶದ ಎಲ್ಲಾ ಶಿವದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗಿದೆ. ಕೇದಾರನಾಥದಲ್ಲಿ ಪ್ರತಿಷ್ಠಾಪಿಸುತ್ತಿರುವ ವಿಗ್ರಹ ಮೈಸೂರಿನಲ್ಲಿ ನಿರ್ಮಾಣಗೊಂಡಿದೆ. ಇದು ಮೈಸೂರಿಗೆ ಹೆಮ್ಮೆಯ ವಿಚಾರ. ಪ್ರಧಾನ ಮಂತ್ರಿಗಳ ಕಾರ್ಯಕ್ರಮವನ್ನ ಜನರಿಗೆ ತಲುಪಿಸುವ ಕೆಲಸ ಆಗುತ್ತಿದೆ ಎಂದರು.
ಶಂಕರಾಚಾರ್ಯರ ನವೀಕೃತ ಪುತ್ಥಳಿ ಉದ್ಘಾಟನೆ
ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ ಸಚಿವರು ಬಳಿಕ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ನವೀಕೃತ ಪುತ್ಥಳಿ ಉದ್ಘಾಟನೆ ಮಾಡಿದ ನೇರ ಪ್ರಸಾರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶಂಕರಾಚಾರ್ಯರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದನ್ನು ತಿಳಿದು ಸಚಿವರು ಸಂತಸ ವ್ಯಕ್ತಪಡಿಸಿದರು. 12 ಅಡಿ ಎತ್ತರ, 28 ಟನ್ ತೂಕದ ಕುಳಿತ ಭಂಗಿಯಲ್ಲಿರುವ ಈ ಪುತ್ಥಳಿಗೆ ಹೆಗ್ಗಡದೇವನಕೋಟೆಯ ಕೃಷ್ಣ ಶಿಲೆ ಬಳಸಲಾಗಿದೆ.
ಚಾರ್ ಧಾಮ್ಗಳಲ್ಲಿ ಒಂದಾದ ಕೇದಾರನಾಥಕ್ಕೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರವಾಹದಲ್ಲಿ ದೇವಸ್ಥಾನ ಹೊರತುಪಡಿಸಿ ಬಹುತೇಕ ಎಲ್ಲಾ ಕೊಚ್ಚಿ ಹೋಗಿತ್ತು. ಅದರಲ್ಲಿ ಶ್ರೀ ಶಂಕರಾಚಾರ್ಯರ ಸಮಾಧಿ ಕೂಡ ಧ್ವಂಸಗೊಂಡಿತ್ತು. ಆದರೀಗ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾನ್ ದಾರ್ಶನಿಕರಾದ ಶಂಕರಾಚಾರ್ಯರ ಸಮಾಧಿಯನ್ನು ಪುನರುತ್ಥಾನಗೊಳಿಸುವುದರ ಜತೆಗೆ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತದ್ದು. ನಿಜಕ್ಕೂ ಇದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದರು.
'ಅದ್ವೈತ' ಸಿದ್ಧಾಂತದ ಮೂಲಕ ಜಾಗೃತಿ
8ನೇ ಶತಮಾನದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಸಂಕಷ್ಟದಲ್ಲಿತ್ತು. ಆಗ ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಧರ್ಮ ಜಾಗೃತಿ ಉಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶಂಕರಾಚಾರ್ಯರು. ವಾಹನಗಳ ಪರಿಕಲ್ಪನೆಯೇ ಇಲ್ಲದಂತ ಕಾಲದಲ್ಲಿ ದೇಶಾದ್ಯಂತ ಕಾಲ್ನಡಿಗೆಯಲ್ಲಿ ಅದ್ವೈತ ತತ್ವ ಪ್ರಚಾರ ಮಾಡಿದ ಮಹಾತ್ಮರು. ಕೇವಲ 32ನೇ ವಯಸ್ಸಿನಲ್ಲೇ ದೇಹತ್ಯಾಗ ಮಾಡಿದರು. ಆದರೆ ಅಲ್ಪಾಯಸ್ಸಿನಲ್ಲಿಯೇ ದೇಶದ ಜನತೆಗೆ ಅಪಾರ ಜ್ಞಾನವನ್ನು ನೀಡಿ ಹೋದರು.
ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ, ವಿದ್ಯಾ ಕೇಂದ್ರಗಳಾಗಿ ಜಗತ್ತಿಗೆ ಜ್ಞಾನ ಸಂಪತ್ತನ್ನು ಧಾರೆ ಎರೆಯುತ್ತಿವೆ. ಇಂತಹ ದೇವತಾ ಸ್ವರೂಪಿಯಾದ ಆಚಾರ್ಯರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಸಕಲರು ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.
14 ಲಕ್ಷ ರೈತರಿಗೆ 10,203.52 ಕೋಟಿ ರೂ. ಸಾಲ: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಲಾಗುತ್ತಿದೆ. 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ ನೀಡಲಾಗಿದ್ದು, ಇದರಲ್ಲಿ 14 ಲಕ್ಷ ರೈತರಿಗೆ 10,203.52 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಇದೇ ವೇಳೆ ಸಚಿವ ಸೋಮಶೇಖರ್ ಮಾಹಿತಿ ನೀಡಿದರು.