ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದೊಡ್ಡ ಹರವೆ ಸಾಕಾನೆ ಶಿಬಿರದಲ್ಲಿ 66 ವರ್ಷದ ಚುಯ್ಯ ಎಂಬ ಹೆಣ್ಣಾನೆ ಮೃತಪಟ್ಟಿರುವ ಘಟನೆ ನಡೆದಿದೆ.
ಜೆಮಿನಿ ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡಿದ್ದ ಈ ಹೆಣ್ಣಾನೆಯನ್ನ ಹುಣಸೂರು ತಾಲೂಕಿನ ದೊಡ್ಡ ಹರವೆಯಲ್ಲಿರುವ ಆನೆ ಶಿಬಿರದಲ್ಲಿಡಲಾಗಿತ್ತು. ದೊಡ್ಡ ಹರವೆ ಸಾಕಾನೆ ಶಿಬಿರದಲ್ಲಿ ಅರಣ್ಯ ರಕ್ಷಣಾ ಕಾರ್ಯಕ್ಕೆ ಬಳಸಿಕೊಂಡು ಆನೆಯನ್ನ ಪೋಷಣೆ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಡಿ.ಮಹೇಶ್‌ಕುಮಾರ್, ಅರಣ್ಯ ಇಲಾಖೆ ಅಧಿಕಾರಿ ಹನುಮಂತರಾಜು ಸೇರಿ ಇತರರು ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯಾಧಿಕಾರಿ ವಾಸಿಂ ಮಿರ್ಜಾ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.