ಮೈಸೂರು: ಚಿನ್ನಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಾರಸ್ವಾಮಿ ಅಲಿಯಾಸ್ ಮದನ್ (20), ನಾಗೇಂದ್ರ ಅಲಿಯಾಸ್ ಅಪ್ಪು (20) ಬಂಧಿತ ಆರೋಪಿಗಳು. ಇವರು ಆಗಸ್ಟ್ 18ರಂದು ತಿ.ನರಸೀಪುರ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಹೊರವಲಯದ ತೋಪಿನಲ್ಲಿ ಅದೇ ಗ್ರಾಮದ ಮಹಾದೇವಿ (50) ಎಂಬ ಮಹಿಳೆಯ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಮಹಿಳೆ ಮೈಮೇಲಿದ್ದ ಕಿವಿ ಓಲೆ, ಮಾಂಗಲ್ಯ ಸರ ತೆಗೆದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಆಡಿಷನಲ್ ಎಸ್.ಪಿ. ಆರ್. ಶಿವಕುಮಾರ್, ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಪ್ರಭಾಕರ್ ರಾವ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದರು. ಈ ತಂಡವು ಕೊಲೆಗಾರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಬಂಧಿತರಿಂದ ಕಿವಿಯೋಲೆ, ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.