ಕಡಬ: ಸರ್ಕಾರಿ ಶಾಲೆಯೊಂದರ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಒಟ್ಟಾಗಿ ಶಾಲೆಯ ಆರ್ಥಿಕತೆ ಪೋಷಿಸುವ ಸಲುವಾಗಿ ಶಾಲಾ ಆವರಣದ ಸುತ್ತ ಅಡಿಕೆ ತೋಟ ನಿರ್ಮಾಣ ಮಾಡಿದ್ದು, ಇದು ಇದೀಗ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಪಡೆದಿದೆ.
ಕೊಯಿಲ ಕೆ ಸಿ ಫಾರ್ಮ್ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಡಕೆ ತೋಟ ಮಾಡಲಾಗಿದೆ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಶಿ ಪುತ್ಯೆ ಮುಂದಾಳತ್ವದಲ್ಲಿ ಈ ನಾಟಿ ಕಾರ್ಯವು ನಡೆದಿದೆ. ಶಾಲಾ ಕೊಠಡಿಗಳ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 450 ಅಡಕೆ ಸಸಿ ನಾಟಿ ಮಾಡಲಾಗಿದೆ.
ಆರಂಭದಲ್ಲಿ ನೆಲ ಸಮತಟ್ಟುಗೊಳಿಸಿ ಬಳಿಕ ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಶಾಲಾ ಆವರಣದ ಸುತ್ತ ಸುಮಾರು 50 ತೆಂಗಿನ ಸಸಿ, 200ಕ್ಕೂ ಹೆಚ್ಚು ಬಾಳೆ ಗಿಡ ನೆಡಲಾಗಿದೆ. ಇದಕ್ಕೆಲ್ಲ ಶಾಲೆಯ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ನೀರಾವರಿಗಾಗಿ ದಾನಿಗಳ ನೆರವಿನಲ್ಲಿ ಪೈಪ್ಗಳನ್ನು ಸಹ ಅಳವಡಿಸಲಾಗಿದೆ.
ದಾನಿಗಳ ಸಹಾಯ: ಗ್ರಾಮದ ಪ್ರಗತಿಪರ ಕೃಷಿಕ ರಾಮನಾಯ್ಕ ಏಣಿತ್ತಡ್ಕ ಎಂಬವರು ತನ್ನ ನರ್ಸರಿಯಿಂದ ಮಂಗಳ ತಳಿಯ ಸುಮಾರು 500 ಅಡಕೆ ಸಸಿಗಳನ್ನು ಉಚಿತವಾಗಿ ನೀಡಿದ್ದಾರೆ. ಧಾರ್ಮಿಕ ಮುಂದಾಳು ಲಿಂಗಪ್ಪ ಗೌಡ ಕಡೆಂಬ್ಯಾಲು ಎಂಬವರು ಧನ ಸಹಾಯದೊಂದಿಗೆ ರಸಗೊಬ್ಬರ ಉಚಿತವಾಗಿ ನೀಡಿದ್ದಾರೆ. ಹಿರಿಯ ವಿದ್ಯಾರ್ಥಿ, ಉದ್ಯಮಿ ದಾಮೋದರ ಪುತ್ಯೆ ವಿದ್ಯುತ್ ಪಂಪು ಶೆಡ್ ನಿರ್ಮಾಣದ ವೆಚ್ಚಗಳನ್ನು ಭರಿಸಿದ್ದಾರೆ. ಪ್ರಗತಿಪರ ಕೃಷಿಕ ಉದಯ ಭಟ್ ಪೂರಿಂಗ, ಮುಖ್ಯ ಶಿಕ್ಷಕಿ ರೇಖಾ ಹೆಚ್ಚಿನ ಧನ ಸಹಾಯ ನೀಡಿ ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.
ಇನ್ನುಳಿದಂತೆ ಸ್ಥಳೀಯ ಪಂಚಾಯತ್, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಊರಿನ ಹಲವು ಜನರು ತಮ್ಮ ಕೈಲಾದಷ್ಟು ಧನ ಸಹಾಯ ನೀಡಿದ್ದಾರೆ. ಊರಿನವರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶ್ರಮದಾನ ಸೇವೆಯಲ್ಲಿ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಇನ್ನೂ ಹಲವರು ಮಂದಿ ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು.
ಶಾಲೆಯ ಆರ್ಥಿಕ ಚೈತನ್ಯಕ್ಕೆ ಈ ಯೋಜನೆ: ನಾಟಿ ಮಾಡಲಾದ ಅಡಕೆ ಕೃಷಿಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಳ್ಳುವ ಜವಬ್ದಾರಿಯನ್ನು ಶಾಲಾಭಿವೃದ್ದಿ ಸಮಿತಿ ವಹಿಸಿಕೊಳ್ಳಲಿದೆ. ಇದರಿಂದ ಬರುವ ಆದಾಯವನ್ನು ಶಾಲೆಯ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರ ಸಂಬಳವನ್ನು ಇದರ ಆದಾಯದಿಂದ ನಿಭಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೈಸಿಕಲ್ ಕೊಂಡೊಯ್ಯಲು ಅನುಮತಿ