ಮಂಗಳೂರು: ನಗರದ ಮರೋಳಿಯಲ್ಲಿರುವ ಜಯನಗರ ಎಂಬಲ್ಲಿ ಭಾನುವಾರದಂದು ಚಿರತೆ ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮೂಲಕ ಚಿರತೆಯನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ.
ಭಾನುವಾರ ಸಂಜೆ 6.30ಕ್ಕೆ ಮರೋಳಿಯ ಜಯನಗರ ನಿವಾಸಿ ಪ್ರತಿಭಾ ಶ್ರೀಧರ ಶೆಟ್ಟಿ ಪುಳಿಂಚ ತಮ್ಮ ಮಕ್ಕಳೊಂದಿಗೆ ವಾಕಿಂಗ್ ಹೋಗಿ ವಾಪಸ್ ಮನೆಗೆ ಬರುತ್ತಿದ್ದರು. ಅವರ ಪುತ್ರಿ ಶ್ರೀನಿಧಿ ಶೆಟ್ಟಿಯವರು ಹಿಂದೆ ಬರುತ್ತಿದ್ದರು. ಈ ಸಂದರ್ಭ ಪ್ರಾಣಿಯೊಂದು ರಸ್ತೆ ದಾಟುತ್ತಿರುವುದನ್ನು ಕಂಡು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಆಗ ಅವರಿಗೆ ಅದು ಯಾವ ಪ್ರಾಣಿಯೆಂದು ಅರಿವಾಗಿರಲಿಲ್ಲ. ಆದರೆ, ಮನೆಗೆ ಬಂದು ಮತ್ತೆ ವಿಡಿಯೋ ನೋಡಿದಾಗ ಅದು ಚಿರತೆಯೆಂದು ತಿಳಿದು ಬಂದಿದೆ.
ಈ ಬಗ್ಗೆ ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ರಾತ್ರಿಯಾದ ಕಾರಣ ಚಿರತೆ ಪತ್ತೆ ಹಚ್ಚುವ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆ ಕಂಕನಾಡಿ ಬಳ್ಳಾಲ್ ಗುಡ್ಡೆಯಲ್ಲಿ ಕಾಣಸಿಕ್ಕಿದೆ. ಈ ಬಗ್ಗೆ ಸ್ಥಳೀಯ ಮನಪಾ ಸದಸ್ಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ಧಾವಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಅಲ್ಲಿನ ಪರಿಸರದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ Beyond Bengaluru ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಸೋಮವಾರ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಇಂದು ಮತ್ತೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.