ಕಲಬುರಗಿ: ಮಹಾನಗರ ಪಾಲಿಕೆ ಡಂಪಿಂಗ್ ಯಾರ್ಡ್ನಲ್ಲಿ 5ರಿಂದ 6 ಲಕ್ಷ ಟನ್ ಹಳೆಯ ಕಸ ಸಂಗ್ರಹಗೊಂಡಿದ್ದು, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅವಶ್ಯಕತೆಯಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಧ್ಯಕ್ಷ ಹಾಗೂ ಉಪ ಲೋಕಾಯುಕ್ತ ಸುಭಾಷ್ ಆಡಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಘನ ತ್ಯಾಜ್ಯ ವಿಲೇವಾರಿ ಕುರಿತು ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಹಳೆಯ ಕಸವನ್ನು ಒಂದೆಡೆ ಹಾಕಲಾಗಿದ್ದು, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಇದಕ್ಕಾಗಿ ಸಿಮೆಂಟ್ ಕಾರ್ಖಾನೆಗಳ ನೆರವು ಪಡೆಯಲಾಗುವುದು. ಕಸ ವರ್ಗೀಕರಣ ಮಾಡಿ, ಸುಟ್ಟು ಹಾಕುವ ಕಸವನ್ನು ಸಿಮೆಂಟ್ ಕಾರ್ಖಾನೆಗೆ ಪೂರೈಕೆ ಮಾಡಿ, ಉಳಿದದ್ದನ್ನು ಗೊಬ್ಬರದ ರೂಪದಲ್ಲಿ ಪರಿವರ್ತನೆ ಮಾಡಿದರೆ ಹಳೆ ಕಸ ವಿಲೇವಾರಿಯಾಗುತ್ತದೆ ಎಂದರು.
ಇನ್ನು ಹಸಿ ಮತ್ತು ಒಣ ಕಸ ವಿಲೇವಾರಿಗೂ ಕ್ರಮ ತೆಗೆದುಕೊಳ್ಳಬೇಕಿದೆ. ಕಲಬುರಗಿ ಜಿಲ್ಲೆಯನ್ನು ತಿಂಗಳೊಳಗಾಗಿ ಪ್ಲಾಸ್ಟಿಕ್ ಮುಕ್ತ ಮಾಡಬೇಕಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೈವಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ಮಾಡದೇ ಇರುವವರಿಗೆ ದಂಡ ವಿಧಿಸುವಂತೆ ಸೂಚಿಸಿದರು.