ಕಲಬುರಗಿ: ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ತನ್ನ ಸಹೋದರನಿಗೆ ದಂಡ ಹಾಕಿದ್ದ ಕಾರಣಕ್ಕೆ ಆತನ ಸಹೋದರ ರೈಲ್ವೆ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ದೆಹಲಿಯಿಂದ ಕರ್ನಾಟಕಕ್ಕೆ ಹೊರಟ ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿದ್ದು, ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ದೆಹಲಿ ಮೂಲದ ಸತ್ಯ ಎಂಬಾತ ಆಗ್ರಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಬೆದರಿಕೆ ಹಾಕಿದವನು. ರೈಲಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಧಮ್ಕಿ ಹಾಕಿದ್ದ ಸತ್ಯನ ಸಹೋದರ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ. ಆಗ್ರಾದ ರೈಲು ನಿಲ್ದಾಣದಲ್ಲಿ ಆತ ಸಿಗರೇಟ್ ಸೇದುವಾಗ ಅಧಿಕಾರಿಯೊಬ್ಬರು ದಂಡ ವಿಧಿಸಿದ್ದಾರೆ.
ಆ ವ್ಯಕ್ತಿಯ ಬಳಿ ಹಣ ಇಲ್ಲದ ಕಾರಣ ಆತನ ಸಹೋದರನಿಗೆ ಕರೆ ಫೋನ್ಪೇ ಮೂಲಕ ದಂಡ ಪಾವತಿಸಿದ್ದಾನೆ. ಬಳಿಕ ರೈಲು ಆಗ್ರಾದಿಂದ ಸಾಗಿದ ಬಳಿಕ ಅಧಿಕಾರಿ ನನಗೆ ಅವಮಾನ ಮಾಡಿದ್ದಾನೆ ಎಂದು ತನ್ನಣ್ಣನಿಗೆ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆತನ ಸಹೋದರ ಕುಡಿದ ಅಮಲಿನಲ್ಲಿ ಆಗ್ರಾ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿದ್ದೇನೆ ಬ್ಲಾಸ್ಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಅಲ್ಲದೇ, ರೈಲಿನಲ್ಲಿ ನನ್ನ ತಮ್ಮ ಸಹ ಇದ್ದಾನೆ. ಅವನನ್ನು ಸೇರಿಸಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಎಲ್ಲರನ್ನೂ ಬ್ಲಾಸ್ಟ್ ಮಾಡುವೆ ಎಂದು ಧಮ್ಕಿ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ರೈಲ್ವೇ ಪೊಲೀಸರು ಮತ್ತು ಎಲ್ಲ ಕಂಟ್ರೋಲ್ ರೂಮ್ಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾನಗಲ್ನಲ್ಲಿ ಆಸ್ತಿಗಾಗಿ 98 ವರ್ಷದ ವೃದ್ಧೆಯ ಕಿಡ್ನಾಪ್: CCTV ವಿಡಿಯೋ
ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಸಹೋದರನ ಪತ್ತೆ ಹಚ್ಚಿದ್ದಾರೆ. ವಿಚಾರಣೆ ನಡೆಸಿದಾಗ ನನ್ನ ಸಹೋದರ ಕುಡಿದ ಮತ್ತಿನಲ್ಲಿ ರೈಲು ಬ್ಲಾಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಹೇಳಿಕೆ ಕೊಟ್ಟಿದ್ದಾನೆ. ವಿಚಾರಣೆ ಬಳಿಕ ಇದು ಸುಳ್ಳು ಬೆದರಿಕೆ ಎಂದು ತಿಳಿದು ಪೊಲೀಸರು ನಿಟ್ಟುಸಿರಾಗಿದ್ದಾರೆ. ಬಳಿಕ ಆ ಯುವಕನನ್ನು ಬೇರೊಂದು ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಿದ್ದಾರೆ.