ಹುಬ್ಬಳ್ಳಿ: ಕೊರೊನಾ ಸೋಂಕಿನ ವಿರುದ್ಧ ವಿಶ್ವದ ವೈದ್ಯರು ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಉಣಕಲ್ ಗ್ರಾಮದ ಪಶುವೈದ್ಯರು ಸಾವಿನ ಮನೆ ಬಾಗಿಲು ತಟ್ಟಿದ್ದ ಗರ್ಭ ಧರಿಸಿದ್ದ ಹಸುವಿಗೆ ಮರುಜನ್ಮ ನೀಡಿದ ಹೃದಯಸ್ಪರ್ಶಿ ಘಟನೆ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ನಡೆದಿದೆ.
ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ದನಗಳು ಗರ್ಭ ಧರಿಸಿದ್ದ ಹಸುವೊಂದನ್ನು ಕೆಳಗೆ ಬೀಳಿಸಿ, ಅದರ ಹೊಟ್ಟೆಗೆ ಇರಿದು ಗಾಯಗೊಳಿಸಿ ಹೋಗಿವೆ. ಆಗ ಅದೇ ಮಾರ್ಗವಾಗಿ ಹೊರಟಿದ್ದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ನರಳುತ್ತಿದ್ದ ಹಸುವನ್ನು ನೋಡಿ ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆಸಿದ್ದಾರೆ.
ಹಸುವನ್ನು ಪರೀಕ್ಷಿಸಿದ ವೈದ್ಯರು ಹಸುವಿನ ಗರ್ಭದಲ್ಲಿರುವ ಕರು ಸತ್ತಿದ್ದು, ಹಸುವನ್ನು ಉಳಿಸುವ ಪ್ರಯತ್ನ ಮಾಡುವುದಾಗಿ ಹೇಳಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸತ್ತು ಹೋದ ಕರುವನ್ನು ಹೊರ ತೆಗೆದಿದ್ದಾರೆ. ಪಶುವೈದ್ಯರ ತಂಡದ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಸು ಚೇತರಿಸಿಕೊಂಡು ಎದ್ದು ನಿಂತಿದೆ.