ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಇದೇ 28 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು,1 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನ ಪಂಚಮಸಾಲಿ ಸಮಾಜ ಹೊಂದಿದೆ. ನಮ್ಮ ಸಮಾಜ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟವನ್ನ ಅನುಭವಿಸುತ್ತಿದೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ರಾಜ್ಯ ಸರ್ಕಾರ 2-ಎ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಓಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನ ಸೇರಿಸಬೇಕು ಎಂದು ಒತ್ತಾಯಿಸಿ ಅ. 28 ರಂದು ನಡೆಯುವ ಸತ್ಯಾಗ್ರಹದಲ್ಲಿ 20 ಸಾವಿರ ಜನರು ಸೇರಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.
ಲಿಂಗಾಯತ ಧರ್ಮ ಹೋರಾಟವನ್ನು ಯಾವತ್ತೂ ನಾವು ಕೈಬಿಟ್ಟಿಲ್ಲ. ಆ ಹೋರಾಟದಲ್ಲಿ ನಾವು ಬಹಳಷ್ಟು ಸಾಧಿಸಿದ್ದೇವೆ. ಹೋರಾಟದಿಂದ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದಿಂದ ಏನು ಉತ್ತರ ಬರುತ್ತೆ ಎಂದು ಕಾದು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಮನವಿಯನ್ನ ತಿರಸ್ಕಾರ ಮಾಡಿಲ್ಲ. ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರವಾಗಿದ್ದು, ನಾವು ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದೇವೆ. ಶಿವಾನಂದ ಜಮಾದಾರ ಅವರ ತಂಡ ಒಂದು ಪುಸ್ತಕವನ್ನ ಸಿದ್ದಗೊಳಿಸಿದೆ. ಕಾನೂನು ಹೋರಾಟಕ್ಕೆ ಸಿದ್ದತೆ ಮಾಡಲಾಗಿದೆ ಎಂದರು.
ಪಂಚಮಸಾಲಿ ಸಮಾಜದ ಜನ ಸ್ವಾಭಿಮಾನಿ ಜನ. ಸಚಿವ ಸ್ಥಾನಕ್ಕೆ ನಮ್ಮ ಸಮಾಜದಿಂದ ಬಹಳಷ್ಟು ಜನ ಅಕಾಂಕ್ಷಿಗಳಿದ್ದಾರೆ. ಆದ್ರೆ, ನಾವು ಸಚಿವ ಸ್ಥಾನ ಕೇಳುವುದಿಲ್ಲ. ಅವರು ಯಾವಾಗ ಬೇಕಾದ್ರು ನಮ್ಮ ಸಮುದಾಯದ ನಾಯಕರನ್ನು ಮಂತ್ರಿ ಮಾಡಲಿ, ಆದ್ರೆ ನಾವು ಮೀಸಲಾತಿ ಕೇಳುತ್ತೇವೆ ಎಂದರು.