ಹುಬ್ಬಳ್ಳಿ: ನಗರದಲ್ಲಿ ಕೋವಿಡ್-19 ಪಾಸಿಟವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಜನಸಂಖ್ಯೆ ವಾಸಿಸುವ ಸ್ಥಳಗಳಲ್ಲಿ ಕೋವಿಡ್ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಸತಿ ಸಮುಚ್ಚಗಳಲ್ಲಿ ಜಿಲ್ಲಾಡಳಿತದಿಂದ ಉಚಿತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದು. ನಾಗರಿಕರು ಸಹಕರಿಸಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.
ಈ ಕುರಿತು ಮಿನಿವಿಧಾನಸೌಧದ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಸತಿ ಸಮುಚ್ಚಯಗಳ ಪ್ರತಿನಿಧಿಗಳ ಸಭೆ ನಡೆಸಿ ಬಳಿಕ ಮಾತನಾಡಿದರು. ಲಕ್ಷಣ ರಹಿತ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇವರು ವಯಸ್ಸಾದವರು ಮತ್ತು ಇತರೆ ರೋಗಿಗಳ ಸಂಪರ್ಕಕ್ಕೆ ಬಂದರೆ ಅವರಿಗೂ ಸೋಂಕು ತಗುಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಮುಂಚಿತವಾಗಿ ಕೋವಿಡ್-19 ಪತ್ತೆ ಹಚ್ಚುವುದರಿಂದ ಹೆಚ್ಚಿನ ಸಾವು ನೋವು ಸಂಭವಿಸುವುದನ್ನು ತಪ್ಪಿಸಬಹದು. ಸರ್ಕಾರದಿಂದ ಎಲ್ಲಾ ಚಿಕಿತ್ಸೆಗಳನ್ನು ಉಚಿತವಾಗಿ ಕಲ್ಪಿಸಲಾಗಿದೆ. ಲಕ್ಷಣ ರಹಿತ ಸೋಂಕಿತರಿಗೆ ಪ್ರತ್ಯೇಕ ಗೃಹ ವಾಸಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ವೈದ್ಯರು ನಿಯಮಿತವಾಗಿ ಮನೆಗೆ ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ. ವಯಸ್ಸಾದವರು ಹಾಗೂ ತೀವ್ರ ಸ್ವರೂಪದ ಸೋಂಕಿತರನ್ನು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುವುದು. ನಾಗರಿಕರು ಭಯಪಡುವ ಅಗತ್ಯವಿಲ್ಲ. ಸ್ವಯಂ ಪ್ರೇರಿತರಾಗಿ ಆಗಮಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಮವಾರದಿಂದ ಆಯ್ದ ವಸತಿ ಸಮುಚ್ಚಯಗಳಲ್ಲಿ ಕೋವಿಡ್ ಪತ್ತೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ, ವೈದ್ಯಾಧಿಕಾರಿ ಪ್ರಭು ಬಿರಾದಾರ ಸೇರಿದಂತೆ ವಿವಿಧ ವಸತಿ ಸಮುಚ್ಚಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.